ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಸದಸ್ಯರು ಹಾಗೂ ಅಧಿಕಾರಿಗಳ ಮೇಲೆ ತಮ್ಮ ನಿಯಂತ್ರಣ ಕಳೆದುಕೊಂಡಿದ್ದಾರೆ. ಎರಡುವರೆ ವರ್ಷದಲ್ಲಿ ಒಂದೂ ಅಭಿವೃದ್ಧಿ ಕೆಲಸವಾಗಿಲ್ಲ. ಯಾವ ಪುರುಷಾರ್ಥಕ್ಕೆ ಈ ಎರಡುವರೆ ವರ್ಷ ಅವಧಿ ಮುಗಿಸಿದರು ಎಂಬುದು ಜನತೆಗೆ ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ಭ್ರಾಂತಿ ಎಲ್ಲ ನೋಡಿದರೆ, ಸರ್ಕಾರದ ಮೇಲೆ ಕರ್ನಾಟಕದ ಜನತೆಗೆ ಭ್ರಾಂತಿಯಾಗುತ್ತಿದೆ. ಕಾಂಗ್ರೆಸ್’ನವರು ಆಡಳಿತವನ್ನೇ ಮರೆತುಬಿಟ್ಟಿದ್ದಾರೆ. ಅಭಿವೃದ್ದಿಯಂತೂ ಮರಿಚಿಕೆಯಾಗಿದೆ. ಹಣಕಾಸು ವ್ಯವಸ್ಥೆ ಇಲ್ಲ, ಹೀಗಾಗಿ ಡ್ರಾಮಾ ಮಾಡಿಕೊಂಡು ಹೊರಟಿದ್ದಾರೆ. ಸಿಎಂ ಸಿದ್ದರಾಮಯ್ಯ ಒಂದು ಹೇಳುತ್ತಾರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅದಕ್ಕೆ ತದ್ವಿರುದ್ಧವಾಗಿ ಹೇಳುತ್ತಾರೆ.
ಮಂತ್ರಿಗಳು ಇನ್ನೊಂದು ಹೇಳುತ್ತಾರೆ. ಸಿಎಂ ಗೆ ಸಚಿವ ಸಂಪುಟದ ಸದಸ್ಯರ ಮೇಲೆ ನಿಯಂತ್ರಣ ತಪ್ಪಿದೆ. ಹೈಕಮಾಂಡ್ ಸಿಎಂ ಬದಲಾವಣೆಯ ಬಗ್ಗೆ ಹೇಳಬೇಡಿ ಅಂದರೂ ಹೇಳುತ್ತಿದ್ದಾರೆ, ಸಿಎಂ ಅವರಿಗೆ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಹಣ ಕಳುಹಿಸುವ ಪರಂಪರೆ
ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ಸಂದಾಯವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿದ್ದಾಗ ಯಾವಾಗಲೂ ಕೂಡ ಇಲ್ಲಿಂದ ಹಣ ಕಳಿಸುವ ಪರಂಪರ ಇದೆ. ಅದಕ್ಕೆ ಬೇಕಾದಂತಹ ಸಾಕಷ್ಟು ಘಟನೆ ನಡೆದಿವೆ. ತೆಲಂಗಾಣ ರಾಜ್ಯದಲ್ಲೂ ದುಡ್ಡಿಲ್ಲ. ಕಾಂಗ್ರೆಸ್ ನವರಿಗೆ ಕರ್ನಾಟಕ ಹಿಂಡುವ ಆಕಳಾಗಿದೆ ಎಂದರು. ಇದನ್ನೂ ಓದಿ: ಟನಲ್ ರಸ್ತೆ ವಿಚಾರದಲ್ಲಿ ನಾನು ತಾಂತ್ರಿಕ ತಜ್ಞ ಅಲ್ಲ: ಡಿಕೆಶಿ
ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎಂಬ ಕೂಗು ಕೇಳಿ ಬರುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದಲಿತ ಸಿಎಂ ಆಗಲಿ ಅದಕ್ಕೆ ಸಂತೋಷ. ಆದರೆ, ಇದ್ದ ಸಿಎಂ ಅವರೇ ಕೆಲಸ ಮಾಡುತ್ತಿಲ್ಲ. ಕರ್ನಾಟಕದ ಹಣೆಬರಹ ಕಾಂಗ್ರೆಸ್ ಕೈಯಲ್ಲಿ ಎಂದೆಂದೂ ಉದ್ದಾರವಾಗಲು ಸಾದ್ಯವಿಲ್ಲ ಎಂದರು.
