ಹಾಸನ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಡ ದೇವತೆ, ಶಕ್ತಿ ದೇವತೆ ಹಾಸನಾಂಬೆಯ ದರ್ಶನಕ್ಕೆ ಸಾವಿರಾರು ಭಕ್ತರ ಸಾಗರವೇ ಹರಿದು ಬರುತ್ತಿದ್ದು, ಸೋಮವಾರ ಬೆಳಿಗ್ಗೆ 5 ರಿಂದ ಮಂಗಳವಾರ ಬೆಳಿಗ್ಗೆ 5 ರ ಅವಧಿಯಲ್ಲಿ ಹಾಸನಾಂಬ ದೇವಾಲಯಕ್ಕೆ ದಾಖಲೆಯ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದಾರೆ ಎಂದು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವಂತಹ ಕೃಷ್ಣಭೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಒಂದನ್ನು ಹಾಕಿರುವ ಅವರು, ಸಕಾಲಿಕ ದರ್ಶನವನ್ನು ಖಚಿತಪಡಿಸಿಕೊಳ್ಳಲು ಬೆಳಗಿನ ಜಾವ 2 ರಿಂದ ಬೆಳಿಗ್ಗೆ 5 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಶುಕ್ರವಾರದಿಂದ ಸೋಮವಾರ ರಾತ್ರಿಯವರೆಗೆ ಒಟ್ಟು 6.4 ಲಕ್ಷ ಜನರು ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಡಿಕೆಶಿ ಭೇಟಿ ಮಾಡಿದ ಸಿಂಗಾಪುರ್ ಕಾನ್ಸುಲೇಟ್
ಇನ್ನು ಸೋಮವಾರ ಕಳೆದ ವರ್ಷ ಇದೇ ದಿನ 1.09 ಲಕ್ಷ ಜನರಿಗೆ ಹೋಲಿಸಿದರೆ ಪ್ರಸ್ತುತ 24 ಗಂಟೆಗಳಲ್ಲಿ 2.29 ಲಕ್ಷ ಜನರು ದರ್ಶನ ಪಡೆದಿದ್ದಾರೆ. ನಾಡಿನ ನಾನಾ ಭಾಗಗಳಿಂದ ಆಗಮಿಸುತ್ತಿರುವ ಸಹಸ್ರ ಸಂಖ್ಯೆಯ ಜನಸಾಮಾನ್ಯರನ್ನು ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ರೈತರು ಮತ್ತು ಸಾಮಾನ್ಯ ಕಾರ್ಮಿಕ ಕುಟುಂಬಗಳು ಬರುತ್ತಿರುವುದು ಸಹ ಸಂತಸದ ವಿಚಾರ ಎಂದು ತಿಳಿಸಿದ್ದಾರೆ.
