ಬೆಂಗಳೂರು: ಕಾಂಗ್ರೆಸ್ ಆಡಳಿತದಿಂದ ದಲಿತರ ವಿರುದ್ಧ ಅನ್ಯಾಯದ ಬಗ್ಗೆ ಒಂದೇ ಒಂದು ಮಾತನಾಡದ ಪ್ರಿಯಾಂಕ್ ಖರ್ಗೆ ಅವರು ಇಲ್ಲಸಲ್ಲದ ವಿಚಾರಗಳಿಗೆ ಸಮಯ ವ್ಯರ್ಥ ಮಾಡುತ್ತಿದ್ದು, ದಲಿತರು ಎನ್ನಿಸಿಕೊಳ್ಳುವುದಕ್ಕೂ ಅವರು ಯೋಗ್ಯರಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಪಲಕ್ಕಾಗಿ, ಪ್ರಚಾರಕ್ಕಾಗಿ ಮತ್ತು ಪತ್ರಿಕೆಗಳ ಮುಖಪುಟದಲ್ಲಿ ಬರುವುದಕ್ಕೆ ಆರ್.ಎಸ್.ಎಸ್.ನ ಬಗ್ಗೆ ಕೇವಲವಾಗಿ ಮಾತನಾಡಬೇಡಿ ಎಂದು ಎಚ್ಚರಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಆರ್.ಎಸ್.ಎಸ್. ಅವಹೇಳನ ಮಾಡಿದೆಯೇ?; ಅವರ ವಿರುದ್ಧವಾಗಿ ನಡೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಶೀಘ್ರದಲ್ಲೇ ಅಂಗೈಯಲ್ಲಿ “ಅಪ್ಪು”ವಿನ ಆ್ಯಪ್
ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್.ಎಸ್.ಎಸ್.ನ ಚಟುವಟಿಕೆಗಳನ್ನು ಹದ್ದುಬಸ್ತಿನಲ್ಲಿ ಇಡಬೇಕು; ಯಾವುದೇ ಸರ್ಕಾರಿ ಶಾಲೆಗಳು, ದೇವಾಲಯಗಳಲ್ಲಿ ಚಟುವಟಿಕೆ ಮಾಡುವುದಕ್ಕೆ ಬಿಡಬಾರದು ಎಂದು ಚರ್ಚೆಯನ್ನು ಹುಟ್ಟುಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಿಂದ ದಲಿತರು ಇಂದು ಕಂಗಾಲಾಗಿದ್ದಾರೆ. 42 ಸಾವಿರ ಕೋಟಿ ನೀಡಿದ್ದೇವೆ ಎಂದು ಹೇಳಿ ಅವರಿಗೆ ಬಿಡಿಗಾಸು ಸಿಗದ ರೀತಿಯಲ್ಲಿ ನಡೆದುಕೊಂಡಿದ್ದೀರಿ. ಇದರ ಬಗ್ಗೆ ಮಾತನಾಡುವುದಕ್ಕೆ ಇವರಿಗೆ ಯೋಗ್ಯತೆ ಇಲ್ಲ ಎಂದು ತಿಳಿಸಿದರು.
ಹಿಂದೆ ಕೂಡ ಆರ್.ಎಸ್.ಎಸ್. ಅನ್ನು ನಿಷೇಧಿಸಲಾಗಿತ್ತು. ಮತ್ತೆ ನಿಷೇಧವನ್ನು ಏಕೆ ವಾಪಸ್ ತೆಗೆದುಕೊಳ್ಳಲಾಯಿತು?; ವಾಪಸ್ ತೆಗೆದುಕೊಳ್ಳಲು ಯಾರು ನಿಮಗೆ ಅರ್ಜಿ ಕೊಟ್ಟರು?; ಆರ್.ಎಸ್.ಎಸ್. ಸಂಘಟನೆಯು ಕೇಳಿತ್ತೇ ಎಂದು ಪ್ರಶ್ನಿಸಿದರು. ಪ್ರಿಯಾಂಕ ಖರ್ಗೆ ಅವರೇ, ನಿಮಗೆ ತಾಕತ್ತು ಇದ್ದರೆ ಆರ್.ಎಸ್.ಎಸ್. ಅನ್ನು ನಿಷೇಧಿಸಿ ನೋಡಿ ಎಂದು ಸವಾಲು ಹಾಕಿದರು.
