ಹಾವೇರಿ: ಮೋದಿ ಎಂದರೆ ಪ್ರೇರಣಾದಾಯಕ ಶಕ್ತಿ. ಇಡಿ ವಿಶ್ವದಲ್ಲಿ ಯಾರದಾದರೂ ಮಾತು ಕೇಳಿದರೆ ಅದು ಮೋದಿಯವರ ಮಾತು. ಕೆಲವರು ನಮ್ಮ ದೇಶವನ್ನು ಒಡೆಯುವ ಮಾತನಾಡುತ್ತಾರೆ. ಹೊರ ದೇಶಕ್ಕೆ ಹೋದಾಗ ನಮ್ಮ ದೇಶದ ಪ್ರಜಾಪ್ರಭುತ್ವದ ಬಗ್ಗೆ ತುಚ್ಚವಾಗಿ ಮಾತನಾಡುತ್ತಾರೆ. ಆದ್ದರಿಂದ ನಮ್ಮ ಯುವಕರು ಜಾಗೃತರಾಗಿರಬೇಕು. ಶಿಕ್ಷಣ, ಉದ್ಯೋಗ ಎಲ್ಲದಕ್ಕೂ ಅವಕಾಶ ಇರುವ ದೇಶ ಭಾರತ, ದೇಶ ಉಳಿದರೆ ಮಾತ್ರ ನಾವು. ಪ್ರಧಾನಮಂತ್ರಿಯವರನ್ನು ನಿಮ್ಮ ಧರ್ಮ ಯಾವುದು ಎಂದು ಕೇಳಿದಾಗ ಸಂವಿಧಾನವೇ ನಮ್ಮ ಧರ್ಮ ಎಂದು ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು (ಶನಿವಾರ ಅ.11) ಹಾವೇರಿಯಲ್ಲಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನೋತ್ಸವದ ಅಂಗವಾಗಿ ನಶೆ ಮುಕ್ತ ಭಾರತದ ಸಂಕಲ್ಪದೊಂದಿಗೆ ಆತ್ಮ ನಿರ್ಭರ ಭಾರತಕ್ಕಾಗಿ ಹಾವೇರಿ ನಮೋ ಯುವ ಓಟ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, 2047ಕ್ಕೆ ಭಾರತ ವಿಶ್ವದ ನಂಬರ್ ಒನ್ ದೇಶ ಆಗಬೇಕೆಂದರೆ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ಸ್ವದೇಶಿ ವಸ್ತುಗಳನ್ನು ಬಳಸಿ ನರೇಂದ್ರ ಮೋದಿಯವರ ನೇತೃತ್ತದಲ್ಲಿ ಭವ್ಯ ಭಾರತ, ಆತ್ಮನಿರ್ಭರ, ನಶಾ ಮುಕ್ತ ಭಾರತ ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ ಎಂದರು.
ಯುವಕರಲ್ಲಿ ದೇಶ ಪ್ರೇಮ ಮೂಡಿಸಬೇಕು. ಜಾಗೃತಿ ಮೂಡಿಸಬೇಕು. ಯುವಕರು ತಮ್ಮ ಬದುಕನ್ನು ಅತ್ಯಂತ ಯಶಸ್ವಿಯಾಗಿ ಅತ್ಯಂತ ತತ್ವನಿಷ್ಠೆಯಿಂದ ಬದುಕಬೇಕೆನ್ನುವುದು ಪ್ರಧಾನ ಮಂತ್ರಿಯವರ ಬಯಕೆ. ಅದಕ್ಕಾಗಿ ಎಲ್ಲ ಕಾರ್ಯಕ್ರಮಗಳಲ್ಲಿ ಯುವಕರನ್ನು ಜೋಡಿಸಿಕೊಂಡಿದ್ದಾರೆ. ಉದಾಹರಣೆಗೆ ಸ್ಟಾರ್ಟ್ ಆಪ್ ಅಂತ ಮಾಡಿದ್ದಾರೆ. ಅದರಲ್ಲಿ ಎಲ್ಲ ಯುವಕರಿಗೆ ಅವಕಾಶ ಕಲ್ಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ದೇಶದಲ್ಲಿ ಸಾವಿರಾರು ಅದಾನಿ, ಅಂಬಾನಿಗಳು ಆಗುತ್ತಾರೆ. ಯಾವ ಸರ್ಕಾರಗಳು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಪ್ರಧಾನಿ ಮೋದಿ ಯುವಕರ ಭಾವನೆ ಅರ್ಥ ಮಾಡಿಕೊಂಡು ಖೇಲೊ ಇಂಡಿಯಾ, ಫಿಟ್ ಇಂಡಿಯಾ ಅಂದರು. ಒಲಿಂಪಿಕ್ ಬಂದಾಗ ಜೀತೋ ಇಂಡಿಯಾ ಅಂತ ಹೇಳಿದರು. ಮೋದಿಯವರ ಕಾಲದಲ್ಲಿ ಭಾರತಕ್ಕೆ ಅತಿ ಹೆಚ್ಚು ಒಲಿಂಪಿಕ್ಸ್ ಮೆಡಲ್ ಸಿಕ್ಕಿದೆ.
25 ಕೋಟಿ ಜನರನ್ನು ಬಡತನದಿಂದ ಮುಕ್ತ ಮಾಡಿದ್ದಾರೆ. ಒಂದು ಕಾಲದಲ್ಲಿ ಗರೀಬಿ ಹಠಾವೊ ಅಂತ ರಾಜಕೀಯ ಪಕ್ಷದವರು ಹೇಳಿದರು. ಗರೀಬಿ ಹಠಾವೋ ಆಗಲಿಲ್ಲ. ಆ ನಾಯಕರೆ ಹಠಾವೊ ಆಗಿದ್ದಾರೆ. 25 ಕೋಟಿ ಜನರು ಬಡತನದಿಂದ ಮುಕ್ತವಾಗಿದ್ದು ವಿಶ್ವ ದಾಖಲೆ ಎಂದು ಹೇಳಿದರು. ಇದನ್ನೂ ಓದಿ: ರಸ್ತೆ ಕಾಮಗಾರಿಗೆ ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಕೆಶಿ
ಮೋದಿಗೆ ಅಭಿನಂದನೆ
ಪ್ರಧಾನಿಯವರು ಧನ್ ಧಾನ್ಯ ಯೋಜನೆ ಮೂಲಕ ರೈತರ ಆದಾಯ ದ್ವಿಗುಣಗೊಳಿಸಲು ಸಮಗ್ರ ಕೃಷಿ ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ ನೀಡುವ ಯೋಜನೆಯಲ್ಲಿ ಹಾವೇರಿ ಗದಗ ಜಿಲ್ಲೆಯನ್ನು ಸೇರಿಸಿಕೊಂಡಿದ್ದಾರೆ. ಅದಕ್ಕಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಬಿ.ಸಿ ಪಾಟೀಲ್, ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಶಿವರಾಜ ಸಜ್ಜನ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ ಡಾ ಬಸವರಾಜ ಕೇಲಗಾರ, ಯುವ ಮುಖಂಡ ಭರತ ಬೊಮ್ಮಾಯಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
