ಬೆಂಗಳೂರು: ಬಿಗ್ ಬಾಸ್ ಮನೆಗೆ ಬೀಗ ಜಡಿದ ಬೆನ್ನಲ್ಲೇ ಜಾಲಿವುಡ್ ಸ್ಟುಡಿಯೋ (ವೇಲ್ಸ್ ಸ್ಟುಡಿಯೋ ಆಂಡ್ ಎಂಟರ್ಟೈನ್ಮೆಂಟ್ ಪ್ರೈ. ಲಿ.) ಇಂದು ಹೈಕೋರ್ಟ್ಗೆ ತುರ್ತು ಅರ್ಜಿ ಸಲ್ಲಿಸಿತ್ತು. ಕೋರ್ಟ್ ಈ ಅರ್ಜಿಯನ್ನು ಪುರಸ್ಕರಿಸಿದ್ದು ನ್ಯಾ.ಸೂರಜ್ ಗೋವಿಂದರಾಜ್ ಅವರ ಪೀಠದಲ್ಲಿ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಿಗದಿಯಾಗಿದೆ.
ಹೌದು, ಕನ್ನಡ ಬಿಗ್ ಬಾಸ್ ಸೀಸನ್ 12 ನಡೆಯುತ್ತಿರುವ ಸ್ಥಳ ಜಾಲಿವುಡ್ ಸ್ಟುಡಿಯೋಗೆ ಕಂದಾಯ ಅಧಿಕಾರಿಗಳು ನಿನ್ನೆ (ಅಕ್ಟೋಬರ್ 7) ರಂದು ಬೀಗ ಜಡಿದಿದ್ದು, ಇಂದು ಜಾಲಿವುಡ್ ಪರ ವಕೀಲರು ಕೋರ್ಟ್ ನಲ್ಲಿ ಅರ್ಜಿಸಲ್ಲಿಸಿದ್ದು, ಬಿಗ್ಬಾಸ್ಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತದಿಂದ ಬಿಗ್ ರಿಲೀಫ್ ಸಿಕ್ಕಿದೆ. ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಯವರು ಸಮಸ್ಯೆ ಇತ್ಯರ್ಥ್ಯಕ್ಕೆ 10 ದಿನಗಳ ತಾತ್ಕಾಲಿಕ ಕಾಲಾವಕಾಶ ನೀಡಿದ್ದಾರೆ.
ಇಂದು (ಬುಧವಾರ ಅಕ್ಟೋಬರ್ 8) ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಜಾಲಿವುಡ್ ಸ್ಟುಡಿಯೋ ಪರ ವಕೀಲ ವಿಶ್ವಾಸ್ ಗೌಡ ಮಾತನಾಡಿ, ಇಂದು ನಮ್ಮ ಕಕ್ಷಿದಾರರು ಜಿಲ್ಲಾಧಿಕಾರಿಗಳು ಭೇಟಿ ಮಾಡಿ ಮಾತನಾಡಿದ್ದಾರೆ. ಈಗ ಡಿಸಿಯವರು 10 ದಿನ ಕಾಲಾವಕಾಶ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬೀಗ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಅ.6 ರಂದು ನೋಟಿಸ್ ನೀಡಿ ಅ.7 ರಂದು ಬೀಗ ಹಾಕಿದ್ದನ್ನು ಪ್ರಶ್ನಿಸಿ ನಾವು ಹೈಕೋರ್ಟ್ಗೆ ರಿಟ್ ಅರ್ಜಿ ಹಾಕಿದ್ದೆವು. ಈಗ ಜಿಲ್ಲಾಡಳಿತ 10 ದಿನಗಳ ಕಾಲಾವಕಾಶ ನೀಡಿದ್ದರಿಂದ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳಿದರು.
