ಶಹಾಪುರ: ತಾಲೂಕಿನಲ್ಲಿ ಗೌರಿ ಹಾಗೂ ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬಗಳು ಒಟ್ಟಿಗೆ ಬಂದಿವೆ. 2 ಧರ್ಮದವರು ಶಾಂತಿ, ಸೌಹರ್ದತೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಜಾವೀದ ಇನಾಂದಾರ ಹೇಳಿದರು.
ನಗರ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಗಣೇಶ ಚತುರ್ಥಿ ಹಾಗೂ ಈದ್ಮಿಲಾದ್ ಅಂಗವಾಗಿ ಶಾಂತಿ ಪಾಲನ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ 100ಕ್ಕೂ ಹೆಚ್ಚು ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಯೋಜಕರು ನೋಡಿಕೊಳ್ಳಬೇಕು. ನಾನಾ ಸಮಿತಿ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಹಿತಕರ ಘಟನೆಗೆ ಅವಕಾಶ ನೀಡದೆ ಹಬ್ಬ ಆಚರಿಸಬೇಕು. ಧ್ವನಿವರ್ದಕಗಳಿಂದ ಯಾರಿಗೂ ತೊಂದರೆಯಾಗಬಾರದು. ಪಿಒಪಿ ಹಾಗೂ ರಾಸಾಯನಿಕ ಬಣ್ಣಗಳ ಮಿಶ್ರಿತ ಮೂರ್ತಿ ಪ್ರತಿಷ್ಠಾಪಿಸದೆ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಬೇಕು. ಅದೇ ರೀತಿ ಮುಸ್ಲಿಂಮರ ಈದ್ ಮಿಲಾದ್ ಹಬ್ಬವು ಇರುವುದರಿಂದ ಯಾವುದೇ ರೀತಿ ಕೋಮು ಗಲಭೆಯಾಗದಂತೆ ಸೌಹರ್ದಯುತವಾಗಿ ಈ 2 ಹಬ್ಬವನ್ನು ಆಚರಣೆ ಮಾಡಬೇಕು ಎಂದು ಹೇಳಿದರು.
ಹಬ್ಬದ ವೇಳೆ ಸರಕಾರದ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಮೂರ್ತಿಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಪ್ರತಿಷ್ಠಾಪಿಸಬಾರದು ಎಂದು ಸೂಚಿಸಿದರು. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಬಿಬಿಎಂಪಿಯಿಂದ ಮಾರ್ಗಸೂಚಿ ಬಿಡುಗಡೆ
ಪಿಐ ಎಸ್.ಎಂ ಪಾಟೀಲ್ ಮಾತನಾಡಿ, ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ರಾತ್ರಿ 10: 30 ರೊಳಗೆ ಮೂರ್ತಿಗಳ ವಿಸರ್ಜನೆಗೆ ಸೂಚನೆಯಿದ್ದು, ನಿಯಮ ಪಾಲಿಸಬೇಕು. ಶಬ್ದ ಮಾಲಿನ್ಯ ಮಾಡುವ ಬೃಹತ್ ಧ್ವನಿವರ್ದಕ ನಿಷೇಧಿಸಲಾಗಿದ್ದು ಮಾರ್ಗಸೂಚಿಯನ್ವಯ ಧ್ವನಿವರ್ಧಕ ಬಳಸಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸಿದ್ದಣ್ಣ ಆರಬೋಳ, ಮುಸ್ತಫ ದರ್ಬಾನ್, ಮಹಾದೇವಪ್ಪ ಸಾಲಿಮನಿ, ಸೈಯದ್ದುದ್ದೀನ್ ಖಾದ್ರಿ, ಶಾಂತಪ್ಪ ಕಟ್ಟಿಮನಿ, ಸಂಗು ವಿಆರ್ಎಲ್, ರಾಯಣ್ಣ ಚಲುವಾದಿ, ಅಶೋಕ ನಾಯಕ್, ಬಸವರಾಜ ನಾಯ್ಕಲ್, ಪಿಎಸ್ಐ ವೆಂಕಟೇಶ ನಾಯಕ ಸೇರಿದಂತೆ ಅನೇಕ ಮುಖಂಡರು, ಯುವಕರು ನಗರಸಭೆ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.
ಕಾನೂನಿನ ಚೌಕಟ್ಟಿನಲ್ಲಿ ಹಬ್ಬ ನಡೆಯಬೇಕು
ಪ್ರತಿಯೊಬ್ಬರು ಸಂಪ್ರದಾಯದಂತೆ ಕಾನೂನಿನ ಚೌಕಟ್ಟಿನೊಳಗೆ 2 ಹಬ್ಬಗಳನ್ನು ಸೌಹರ್ದಯುತವಾಗಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಆಚರಿಸಿ, ಪೊಲೀಸ್ ಇಲಾಖೆಗೆ ಸಹಕರಿಸೋಣ ಎಂದು ಹಿರಿಯರಾದ ಗುಂಡಪ್ಪ ತುಂಬಗಿ ಹೇಳಿದರು.
ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಎರಡು ಶಾಂತಿಯುತವಾಗಿ ನಡೆಯಬೇಕು
ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ ಒದಗಿಸಲಾಗುವುದು. ಎರಡು ಬೇಸ್ ಎರಡು ಟಾಪ್ 4 ಸ್ಫೀಕರ್ಗೆ ಅವಕಾಶವಿದೆ. ಗಣೇಶ ಪ್ರತಿಷ್ಠಾಪನೆಗೆ 10 ಜನರ ಆಧಾರ್ ಕಾರ್ಡ್ ಮತ್ತು ಫೋಟೊಗಳನ್ನು ನೀಡಬೇಕು. ಮತ್ತು ಪೊಲೀಸ್ ಇಲಾಖೆ, ನಗರಸಭೆ ಮತ್ತು ಕೆಇಬಿಗಳಲ್ಲಿ ಅನುಮತಿ ಪಡೆಯಬೇಕು. ಸೆ.4 ರಂದು ಈದ್ ಮಿಲಾದ ಹಿನ್ನಲೆಯಲ್ಲಿ ಸೆ.5 ರಂದು 9ನೇ ದಿನದ ಗಣೇಶ ವಿರ್ಜನೆಗೆ ಅನುಮತಿ ಇರುವುದಿಲ್ಲಾ. ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ನಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದು ಡಿವೈಎಸ್ಪಿ ಜವೇದ್ ಇನಾಮದಾರ್ ಹೇಳಿದರು.
