ಬೊಮ್ಮನಹಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ಹೊಸ ಮೆಟ್ರೋ ಕಾರಿಡಾರ್-19.15 ಕಿ.ಮೀ. ಹಳದಿ ಮಾರ್ಗವನ್ನು ಉದ್ಘಾಟಿಸಿದರು. ಈ ವೇಳೆ ನಗರಕ್ಕೆ ಪ್ರಧಾನಿಯವರು ಆಗಮಿಸಿದಾಗ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿಯವರು ಸ್ವಾಗತಿಸಿ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ಶಾಸಕ ಎಂ. ಸತೀಶ್ ರೆಡ್ಡಿಯವರು, ಮಾಹಿತಿ ತಂತ್ರಜ್ಞಾನದ ಹಬ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಗೆ ಪ್ರತಿನಿತ್ಯ ಓಡಾಡುವವರ ಸಂಖ್ಯೆ ಅಧಿಕವಾಗಿದ್ದು, ಇನ್ನು ಮುಂದೆ ಸಂಚಾರ ಸುಗಮವಾಗಲಿದೆ. ಸಿಲ್ಕ್ ಬೋರ್ಡ್ನಲ್ಲಿ ಟ್ರಾಫಿಕ್ ಜಾಮ್ನಿಂದಾಗಿ ಕೆಲಸಕ್ಕೆ ತೆರಳುವವರಿಗೆ ತೊಂದರೆಯಾಗುತ್ತಿತ್ತು. ಇನ್ನು ಮುಂದೆ ಸಂಚಾರ ಸುಗಮವಾಗಲಿದೆ ಎಂದರು.
ಸೋಮವಾರ ಬೆಳಿಗ್ಗೆ ವಿಧಾನಸಭಾ ಕಲಾಪದ ಹಿನ್ನೆಲೆ ಶಾಸಕ ಎಂ. ಸತೀಶ್ ರೆಡ್ಡಿಯವರು ಮೆಟ್ರೋ ನಿಲ್ದಾಣಕ್ಕೆ ತೆರಳಿ ಸಾಮಾನ್ಯರಂತೆ ಟಿಕೆಟ್ ಖರೀದಿಸಿ ಪ್ರಯಾಣ ಆರಂಭಿಸಿದರು.
ಈ ವೇಳೆ ಸಹ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದ ಶಾಸಕರು, ಮೆಟ್ರೋದಿಂದಾಗುತ್ತಿರುವ ಅನುಕೂಲತೆಯ ವಿವರವನ್ನು ಕೇಳಿದರು. ಮೆಟ್ರೋ ಬನಶಂಕರಿವರೆಗೂ ಇದ್ದು ಇದೀಗ ಸಂಚಾರ ಸುಗಮವಾಗಲಿದೆ. ಬನಶಂಕರಿಯಿಂದ ನಾವು ನಗರದ ಪ್ರಮುಖ ಸ್ಥಳಗಳಿಗೂ ಮೆಟ್ರೋ ಅವಲಂಬಿಸಬಹುದು. ಇದರಿಂದಾಗಿ ಕೆಲಸಗಳು ತುರ್ತಾಗಿ ಸಾಗುತ್ತವೆ ಎಂದರು. ಇನ್ನು ಕೆಲವು ಮೆಟ್ರೋ ಪ್ರಯಾಣ ಕೊಂಚ ದುಬಾರಿಯೂ ಆಗಿದೆ ಎಂದು ತಮ್ಮ ಅನಿಸಿಕೆ ತಿಳಿಸಿದರು. ಇದನ್ನೂ ಓದಿ: ವಿಧಾನಸಭೆ ಅಧಿವೇಶನಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಿದ ಶಾಸಕ ಎಂ ಸತೀಶ್ ರೆಡ್ಡಿ
ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಜಲ್ಲಿ ರಮೇಶ್, ಮಂಜುನಾಥ ರೆಡ್ಡಿ, ಸೋಮಸಂದ್ರಪಾಳ್ಯ ಶ್ರೀನಿವಾಸ ರೆಡ್ಡಿ, ಹೆಚ್.ಎಸ್.ಆರ್. ಗುರುಮೂರ್ತಿ ರೆಡ್ಡಿ, ಕೇಬಲ್ ಶ್ರೀನಿವಾಸ ರೆಡ್ಡಿ, ಬಿಜೆಪಿ ಮುಖಂಡರುಗಳು, ಕಾರ್ಯಕರ್ತರು ಭಾಗವಹಿಸಿದ್ದರು.
