ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಮ್ಯಾ ಅವರಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ್ ಅವರ ಅಭಿಮಾನಿಗಳು ಅಶ್ಲೀಲವಾಗಿ ಕಾಮೆಂಟ್ಸ್ ಹಾಕಿರುವುದನ್ನು ನಟಿ ರಮ್ಯಾ ಅವರು ಅವೆಲ್ಲವನ್ನು ಸ್ಕ್ರೀನ್ಶಾಟ್ ತೆಗೆದು ತಮ್ಮ instagram ಸ್ಟೋರಿಯಲ್ಲಿ ಅಪ್ಲೋಡ್ ಮಾಡಿದ್ದಾರೆ.
ಈ ಕುರಿತು ಈಗಾಗಲೇ ಗೃಹ ಸಚಿವರು ಕೂಡ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಇದೀಗ ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಪ್ರತಿಕ್ರಿಯಿಸಿದ್ದಾರೆ
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ವಯಂ ಪ್ರೇರಿತ ದೂರು ದಾಖಲಿಸಲು ನಿರ್ಧರಿಸಲಾಗಿದೆ. ಅಕಸ್ಮಾತ್ ರಮ್ಯಾ ಅವರು ದೂರು ನೀಡಿದರೆ ಕಾಮೆಂಟ್ಸ್ ಹಾಕಿರುವವರ ವಿರುದ್ಧ ಎಫ್ಐಆರ್ ದಾಖಲಾಗಿ ಸುಮಾರು ಮೂರರಿಂದ ಏಳು ವರ್ಷ ಶಿಕ್ಷೆ ಆಗಬಹುದು ಎಂದು ತಿಳಿಸಿದ್ದಾರೆ.
ಕೇವಲ ರಮ್ಯಾ ಅಂತಲ್ಲ, ಬೇರೆ ಬೇರೆ ಕಡೆ ಏನಾದರೂ ಆದಾಗ ಈ ತರ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ತುಂಬಾ ಜನ ಸೆಲೆಬ್ರಿಟಿಗಳು ನಮ್ಮಲ್ಲಿಗೆ ಬಂದು ದೂರು ಕೊಡುತ್ತಾರೆ. ಯಾರು ಅಶ್ಲೀಲ ಪದವನ್ನು ಬಳಕೆ ಮಾಡಬೇಡಿ. ಯಾವ ಮಹಿಳೆಗೂ ಕೂಡ ಅಗೌರವ ತೋರಬೇಡಿ. ನಿಮ್ಮ ಕೆಟ್ಟ ಪದಬಳಕೆಯಿಂದಾಗಿ ಮುಂದೊಂದು ದಿನ ಜೈಲಿಗೂ ಹೋಗಬಹುದು. ಕಾನೂನಿನ ಪ್ರಕಾರ ಇದು ದೊಡ್ಡ ಅಪರಾಧ. ಈ ರೀತಿ ಒಬ್ಬರನ್ನು ನೋಡಿ ಇನ್ನೊಬ್ಬರು ಮಾಡೋದು ಬೇಡ. ಇದು ಸರಿಯಲ್ಲ. ಒಂದು ವೇಳೆ ರಮ್ಯಾ ದೂರು ದಾಖಲು ಮಾಡಿದರೆ ಖಂಡಿತಾ ಎಫ್‌ಐಆರ್ ಆಗುತ್ತದೆ. ಬಳಿಕ ಮೂರರಿಂದ ಏಳು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿರುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಮ್ಯಾಗೆ ಡಿ ಫ್ಯಾನ್ಸ್ ಅಶ್ಲೀಲ ಕಾಮೆಂಟ್ಸ್, ಗೃಹ ಸಚಿವರು ಹೇಳಿದ್ದೇನು?
ಸೋಷಿಯಲ್ ಮೀಡಿಯಾದಲ್ಲಿ ಮಾನಹಾನಿ ಪ್ರಕರಣ ಮಾಡಿದರೆ ಅದಕ್ಕೆ ತುಂಬಾ ಗಂಭೀರ ಶಿಕ್ಷೆ ಇದೆ. ಬಹುತೇಕರಿಗೆ ಇದರ ಬಗ್ಗೆ ಅರಿವೇ ಇಲ್ಲ. ಸದ್ಯ ಮಹಿಳಾ ಆಯೋಗ ರಮ್ಯಾ ವಿಚಾರವಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸ್ ಕಮೀಷನರ್‌ಗೆ ಪತ್ರ ಬರೆಯಲು ನಿರ್ಧರಿಸಿದೆ. ಇಲ್ಲದೇ ಹೋದರೆ ಇದೇ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.
