ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದಲ್ಲ ಒಂದು ಪ್ರಕರಣಗಳು ಬೆಳಕಿಗೆ ಬಂದೇ ಬರುತ್ತವೆ.
ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಬಹು ಕೋಟಿ ಹಗರಣದಲ್ಲಿ ಈಗಾಗಲೇ ಮಾಜಿ ಸಚಿವ ಬಿ ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಿ ಷರತು ಬದ್ಧ ಜಾಮೀನು ಮೇಲೆ ಹೊರ ಬಂದಿದ್ದಾರೆ.
ಮತ್ತೆ ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಗಳ ಮೇಲೆ ಆರೋಪ ಮಾಡುತ್ತಿರುವುದನ್ನಲೇ ಸಚಿವ ಜಮೀರ್ ಅಹ್ಮದ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ.
ಹೌದು, ಸಚಿವ ಜಮೀರ್ ಅಹ್ಮದ್ ಅಲ್ಪಸಂಖ್ಯಾತ ಇಲಾಖೆಯಲ್ಲಿ ಅನುದಾನ ದುರ್ಬಳಕೆ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಜೆಡಿಎಸ್ ದೂರು ನೀಡಿತ್ತು. ಸದ್ಯ ದೂರಿನ ಬಗ್ಗೆ ಸ್ಪಷ್ಟನೆ ಕೇಳಿರುವ ರಾಜ್ಯಪಾಲರು ಕೆಲ ದಾಖಲೆಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಒಂದು ವೇಳೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ರೆ ಸಚಿವ ಜಮೀರ್ಗೆ ಸಂಕಷ್ಟ ಎದುರಾಗಲಿದೆ.
ಸಚಿವ ಜಮೀರ್ ಅಹ್ಮದ್ ಖಾನ್ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೇ ಅಸ್ತ್ರ ಹಿಡಿದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದವು. ಬಳಿಕ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಜೆಡಿಎಸ್ ದೂರು ನೀಡಿದ್ದು ಇದು ಸಚಿವ ಜಮೀರ್ಗೆ ಸಂಕಷ್ಟ ತಂದೊಡ್ಡಿದೆ.
ಮೂಡಾ, ವಾಲ್ಮೀಕಿ ನಿಗಮ, ವಸತಿ ಇಲಾಖೆ ಬಳಿಕ ಅಲ್ಪಸಂಖ್ಯಾತ ಇಲಾಖೆಯಲ್ಲೂ ಅಕ್ರಮದ ಹೊಗೆಯಾಡ್ತಿದ್ದು ಸಚಿವ ಜಮೀರ್ ಅಹ್ಮದ್ ಸುತ್ತ ಹಗರಣ ಸುತ್ತಿಕೊಂಡಿದೆ. ಬರೋಬ್ಬರಿ 625 ಕೋಟಿ ಅನುದಾನ ದುರ್ಬಳಕೆ ಆರೋಪ ಕೇಳಿಬಂದಿದೆ. ಸಿಎಂ ಅನುಮೋದನೆಯನ್ನೇ ಪಡೆಯದೇ ಹಾಗೂ ಆರ್ಥಿಕ ಇಲಾಖೆಯ ಸಹಮತಿ ಇಲ್ಲದೇ ಗುತ್ತಿಗೆದಾರರ ಜೊತೆ ಶಾಮೀಲಾಗಿ ಸಚಿವ ಜಮೀರ್ ಅಹ್ಮದ್ ಖಾನ್ 625 ಕೋಟಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ಬಳಿಕ ಜೆಡಿಎಸ್, ಸಚಿವ ಜಮೀರ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು. ಇದನ್ನೂ ಓದಿ: ಬಿಜೆಪಿಗೆ ಈಗ ಜ್ಞಾನೋದಯವಾಗಿದೆ: ಚಲುವರಾಯಸ್ವಾಮಿ
ಸಚಿವ ಜಮೀರ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ JDS ವಕ್ತಾರ ಪ್ರದೀಪ್ ಕುಮಾರ್ ದೂರು ನೀಡಿದ್ದರು. ಸದ್ಯ ಪ್ರದೀಪ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಲಾವ್ ನೀಡಿದ್ದಾರೆ. ಕೆಲ ದಾಖಲೆಗಳ ಬಗ್ಗೆ ಮಾಹಿತಿ ನೀಡುವಂತೆ ಗವರ್ನರ್ ಸೂಚನೆ ನೀಡಿದ್ದಾರೆ. ಪ್ರದೀಪ್ ಕುಮಾರ್ ದೂರಿನ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಇನ್ನು ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ಕೊಟ್ರೆ ಸಚಿವ ಜಮೀರ್ಗೆ ಸಂಕಷ್ಟ ಎದುರಾಗಲಿದೆ. ಅನುಮತಿ ನೀಡಿದ್ರೆ ಜನಪ್ರತಿನಿಧಿಗಳ ಕೋರ್ಟ್ಗೆ ದೂರು ನೀಡಲು JDS ವಕ್ತಾರ ಪ್ರದೀಪ್ ನಿರ್ಧಾರ ಮಾಡಿದ್ದಾರೆನ್ನಲಾಗಿದೆ.
