ಶಹಾಪುರ: ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಸವರ್ಣಿಯ ಜಾತಿಯ ಮಹಿಳೆಯರು ಜಾತಿ ನಿಂದನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಟದ ಆರೋಪದ ಮೇಲೆ ದಲಿತ ದೌರ್ಜನ್ಯದ ಅಡಿಯಲ್ಲಿ 7 ಜನರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಿಂಗಳ ಹಿಂದೆ ವಿಭೂತಿಹಳ್ಳಿ ಗ್ರಾಮದಲ್ಲಿ ದಲಿತರ ಬಡಾವಣೆಗೆ ತೆರಳಲು ಹೊಸ ರಸ್ತೆ ನಿರ್ಮಿಸುವುದನ್ನು ಅದೇ ಗ್ರಾಮದ ಮಹಿಳೆಯರು ಹಾಗೂ ಅಲ್ಲಿನ ನಿವಾಸಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ರಸ್ತೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.
ಕಳೆದ ಜೂ.21ರಂದು ರಸ್ತೆ ವಿಷಯವಾಗಿ ಮತ್ತೆ ಜಗಳ ನಡೆದಾಗ ಗ್ರಾಮದ ಕುರುಬ ಸಮುದಾಯದ ಯಲ್ಲಮ್ಮ ದಪೇದಾರ ಹಾಗೂ ಇನ್ನಿತರರು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅದನ್ನು ನೋಡಿ ಗೊತ್ತಾಗಿದ್ದರಿಂದ ತಡವಾಗಿ ಬಂದು ದೂರು ಸಲ್ಲಿಸುತ್ತಿರುವುದಾಗಿ ಗ್ರಾಮದ ದಲಿತ ಮುಖಂಡ ಬಸವರಾಜ ನಾಟೇಕಾರ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಧರಣಿ
ವಿಭೂತಿಹಳ್ಳಿ ಗ್ರಾಮದಲ್ಲಿ ಸವರ್ಣಿಯ ಕುರುಬ ಸಮುದಾಯದವರು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ತಕ್ಷಣ ಅವರ ವಿರುದ್ಧ ದೂರು ದಾಖಲಿಸಬೇಕು ಹಾಗೂ ಗ್ರಾಮದಲ್ಲಿ ವಾಸಿಸುವ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಶಹಾಪುರ ಠಾಣೆಯ ಎದುರು ದಲಿತ ಮುಖಂಡರು ಧರಣಿ ನಡೆಸಿದರು.
ಗುರುವಾರ ಕುರುಬ ಸಮುದಾಯದ ಮುಖಂಡರು ಸಹ ಪ್ರತಿದೂರು ದಾಖಲಿಸಲು ಪಟ್ಟು ಹಿಡಿದರು. ಆದರೆ ಪೊಲೀಸರು ದೂರು ಪಡೆಯಲು ನಿರಾಕರಿಸಿದರು.
ಘಟನಾ ಸ್ಥಳಕ್ಕೆ ಎಸ್.ಪಿ ಅವರೊಂದಿಗೆ ಬೇಟಿ ನೀಡಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು ಎಸ್.ಎಂ ಪಾಟೀಲ್. ಪಿಐ ಹೇಳಿದರು.
ಸರಕಾರಿ ಗೈರಾಣಿ ಜಮೀನಿನಲ್ಲಿ ರಸ್ತೆ ಮಾಡಿಕೊಂಡರೆ, ಸವರ್ಣಿಯರು ಯಾವುದೇ ಕಾರಣಕ್ಕೂ ಬಿಡುವುದಿಲ್ಲಾವೆಂದು ಕಾಮಗಾರಿ ಬಂದ್ ಮಾಡಿ ಅಡ್ಡ ಕಲ್ಲು ಗೋಡೆ ಕಟ್ಟಿದ್ದು, ಜಿಲ್ಲಾಡಾಳಿತ ಮತ್ತು ತಾಲೂಕಾಡಳಿತದ ನಿರ್ಲಕ್ಷಕ್ಕೆ ಇಂತಹ ಘಟನೆಗಳು ಸಾಕ್ಷಿಯಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಹೋಗಿ ಬೇಟಿ ನೀಡಿ ಪರಿಶೀಲಿಸಿ ತಿಳಿ ಹೇಳಿದರೆ ಇಂತಹ ಘಟನೆಗಳು ಸಂಭವಿಸುತ್ತಿರಲಿಲ್ಲಾ, ಇದಕ್ಕೆ ತಾಲೂಕಾಡಳಿತವೆ ನೇರ ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚಾದ ಗಲಭೆಗಳು
ತಾಲೂಕಿನೆಲ್ಲೆಡೆ ಗುಂಪುಘರ್ಷಣೆಗಳು ಹೆಚ್ಚಾಗುತ್ತಿದ್ದು, ಒಂದಿಲ್ಲಾ ಒಂದು ವಿಷಯಕ್ಕೆ ಗಲಭೆಗಳು ಉಂಟಾಗುತ್ತಿವೆ. ಸಗರನಾಡಿನಲ್ಲಿ ಶಾಂತಿ ಸೌಹಾರ್ದತೆ ಕದಡುವ ಕೆಲಸ ಕಾಣದ ಕೈಗಳು ಮಾಡುತ್ತಿವೆ. ಇಂತಹ ಗಲಭೆಗೆ ಕಾರಣರಾಗುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಕಾನೂನಿನ ರೀತಿ ಕಠಿಣ ಕ್ರಮ ಆಗಲೆಬೇಕು, ಜಿಲ್ಲಾ ಉಸ್ತುವಾರಿ ಸಚಿವರು ಸಹ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
