ಬೆಂಗಳೂರು: ಸ್ಥಳೀಯ ಶಾಸಕರನ್ನೇ ಆಹ್ವಾನಿಸದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಲಾಟೆ ನಡೆದು ಕಾರ್ಯಕ್ರಮವೇ ರದ್ದಾಗಿರುವ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬಿಬಿಎಂಪಿ ಕಾರ್ಯಕ್ರಮದಲ್ಲಿ ನಡೆದ ಘಟನೆಗೆ ಶಾಸಕರು ಸಿಟ್ಟಾಗಿ ಕಾರ್ಯಕ್ರಮದೊಂದಿಗೇ ಅಂತ್ಯವಾಗಿದ್ದು ಬೆಳಕಿಗೆ ಬಂದಿದೆ.
ಇದರಿಂದ ಸಿಟ್ಟಾಗಿರುವ ಶಾಸಕ ಪ್ರಿಯಾ ಕೃಷ್ಣ ಅವರು ಬಿಬಿಎಂಪಿಯ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸದನದಲ್ಲಿ ಪ್ರಸ್ತಾಪಿಸಿ ಕ್ರಮಕ್ಕೆ ಮುಂದಾಗಿರುವುದೂ ಗೊತ್ತಾಗಿದೆ.
ಬಿಬಿಎಂಪಿ ಗೋವಿಂದರಾಜನಗರ ಡಾ.ಬಾಲಗಂಗಾಧರ ನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿಯಲ್ಲಿ ಏರ್ಪಡಿಸಿದ್ದ ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಗವಹಿಸಬೇಕಿತ್ತು. ಸ್ಥಳೀಯ ಶಾಸಕ ಪ್ರಿಯಾ ಕೃಷ್ಣ ಅವರು ಅಧ್ಯಕ್ಷತೆ ವಹಿಸಬೇಕಿತ್ತು. ಆದರೆ ಬಿಬಿಎಂಪಿ ವಲಯ ಆಯುಕ್ತರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಯಕ್ರಮದಲ್ಲಿ ಭಾರೀ ಗಲಾಟೆ ನಡೆದು ಆಯೋಜಕರು ಮತ್ತು ಶಾಸಕರ ಬೆಂಬಲಿಗರಿಗೂ ಮಾತಿನ ಚಕಮಕಿ ನಡೆದಿದೆ.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಾಸಕ ಹೆಸರನ್ನು ಕಾಟಾಚಾರಕ್ಕೆ ಮುದ್ರಿಸಲಾಗಿದ್ದು, ಅವರನ್ನು ಅಧಿಕೃತವಾಗಿ ಆಹ್ವಾನಿಸಿಲ್ಲ. ಈಗ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಹೇಳುವುದು ಸರಿಯಲ್ಲ. ಇದರಲ್ಲಿ ಬಿಬಿಎಂಪಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಬೇಜವಾಬ್ದಾರಿತನ ಮತ್ತು ಕರ್ತವ್ಯ ಲೋಪ ಎದ್ದು ಕಾಣುತ್ತದೆ ಎಂದು ಶಾಸಕರ ಬೆಂಬಲಿಗರು ದೂರಿದರು. ಅದರಲ್ಲೂಇತ್ತೀಚಿಗೆ ಬಿಬಿಎಂಪಿಯಲ್ಲಿ ಹೊಸದಾಗಿ ಬಂದಿರುವ ಉಪ ಮುಖ್ಯಮಂತ್ರಿ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜು ಎಂಬುವರು ಕಾರ್ಯಕ್ರಮಗಳ ಜವಾಬ್ದಾರಿಗಳನ್ನು ವಹಿಸಿಕೊಂಡ ನಂತರ ಈ ಎಲ್ಲಾ ಪ್ರಮಾದಗಳು ನಡೆಯುತ್ತಿವೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಬಿಬಿಿಎಂಪಿ ಆಯುಕ್ತರು ಮತ್ತು ಉಪ ಮುಖ್ಯಮಂತ್ರಿ ಅವರಿಗೂ ದೂರು ನೀಡುವುದಾಗಿಯೂ ಶಾಸಕರ ಬೆಂಬಲಿಗರು ಮಾಧ್ಯಮಗಳಿಗೆ ತಿಳಿಸಿದರು.
