ಶಹಾಪುರ: ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಗುಣಮಟ್ಟ ಕಡಿಮೆಯಾಗುತ್ತಿದ್ದು, ಶಿಕ್ಷಕರನ್ನು ಕೇವಲ ಬೋಧನಾ ಕಾರ್ಯಕ್ಕೆ ಸೀಮಿತಗೊಳಿಸಿ ಬೋಧನೇತರ ಕಾರ್ಯಗಳಿಗೆ (ಬಿ.ಎಲ್.ಓ) ಬಳಸದೇ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಹಿಂದುಳಿದ ಹಣೆಪಟ್ಟಿ ತೆಗೆದುಹಾಕಲು ಶಿಕ್ಷಕರಿಗೆ ಕೇವಲ ಬೋಧನಾ ಕಾರ್ಯಕ್ಕೆ ಸೀಮಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಹುದ್ದೆ ಪ್ರತಿಶತ 40% ಹುದ್ದೆಗಳ ಖಾಲಿ ಇದ್ದು, ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಶಿಕ್ಷಕರು ಬೋಧನೆಯ ಜೊತೆಗೆ ಇಲಾಖೆಯ ಹಲವಾರು ಯೋಜನೆಗಳಾದ ಬಿಸಿಯೂಟ ನಿರ್ವಹಣೆ, ಎಸ್.ಟಿ.ಎಸ್. ನಿರ್ವಾಹಣೆ, ಜನಗಣತಿ, ಜಾತಿಗಣತಿ, ಮೊಟ್ಟೆ-ಬಾಳೆಹಣ್ಣು ವಿತರಣೆ, ಹಾಲು ವಿತರಣೆ, ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಜೊತೆಗೆ ಶಾಲೆಗೆ ಕರೆತರುವುದು ಅಂತರ್ಜಾಲ ಸೇವೆ ಹೀಗೆ ಹಲವಾರು ಭೊಧನೇತರ ಚಟುವಟಿಕೆಗಳಲ್ಲಿ ಈ ಮೇಲಿನ ಕಾರ್ಯಗಳನ್ನು ಶಿಕ್ಷಕರು ನಿರ್ವಹಿಸುತ್ತಿದ್ದು ಇದರಿಂದ ಭೊದನಾ ಕಾರ್ಯಕ್ಕೆ ತೊಂದರೆಯಾಗುತ್ತಿದ್ದು, ಈಗಾಗಲೇ ಶಿಕ್ಷಕರನ್ನು ಬೂತ್‌ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದೀರಿ.
ಹೆಚ್ಚುವರಿಯಾಗಿ ಅಂಗನವಾಡಿಯವರ ಸ್ಥಳದಲ್ಲಿ ಮತ್ತೆ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, ಇದರಿಂದ ಶಿಕ್ಷಕರು ಮಕ್ಕಳ ಬೋಧನಾ ಕಾರ್ಯಕ್ಕೆ ಸೀಮಿತವಾಗದೇ ಹೆಚ್ಚುವರಿ ಕೆಲಸಗಳಲ್ಲಿ ತೊಡಗಿರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಸಿತವಾಗುತ್ತಿದೆ ಈ ಕಾರಣಗಳಿಂದ
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬಿ.ಎಲ್.ಓ. ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಬಾರದು ಮತ್ತು ಈಗಾಗಲೇ ನಿಯೋಜಿಸಿದ ಆದೇಶವನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ.ರಾ.ಪ.ಪ್ರಾ.ಶಾ.ಶಿ. ಸಂಘದ ತಾಲೂಕ ಅಧ್ಯಕ್ಷ ಸಿದ್ದನಗೌಡ ಗೂಗಲ್, ಕ.ರಾ.ಪ್ರೌ.ಶಾ.ಶಿ. ಸಂಘದ ಅಧ್ಯಕ್ಷ ಭೀಮನಗೌಡ ತಳೇವಾಡ, ಕ.ರಾ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಲಕ್ಷ್ಮಣ ಲಾಳಸೇರಿ ಸೇರಿದಂತೆ ಶಿಕ್ಷಕರು ಇದ್ದರು.
