ಬೆಂಗಳೂರು: ದೇಶದಲ್ಲಿರುವ ಪ್ರತಿಯೊಬ್ಬ ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಇತಿಹಾಸದಲ್ಲಿ ಮಹಿಳಾ ಹಕ್ಕುಗಳಿಗಾಗಿ ಹಿಂದೂ ಕೋಡ್ ಬಿಲ್ ಮೂಲಕ ಶಾಸನ ಬದ್ಧವಾಗಿ ಕಾಯ್ದೆಗಳನ್ನು ಪ್ರಸ್ತಾಪ ಮಾಡಿದ ಮೊದಲ ಭಾರತೀಯರಾಗಿದ್ದು ಅಂತಹ ಮಹಾನ್ ಮಹಿಳಾ ಚಿಂತಕರನ್ನು ಈ ದೇಶದ ಎಲ್ಲ ಮಹಿಳೆಯರೂ ನೆನಪಿಡಬೇಕೆಂದು ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪನವರು ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ FICCI flo ಇವರ ಸಹಯೋಗದಲ್ಲಿ ಜರುಗಿದ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮುದಾಯದ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸುತ್ತಿರುವ ಕ್ರೈಸ್ ವಸತಿ ಶಿಕ್ಷಣ ಸಂಸ್ಥೆಯು ಇದೀಗ ತನ್ನ ಸಂಸ್ಥೆಯ ಮಹಿಳಾ ಸಿಬ್ಬಂದಿಗಳಿಗೆ ಆರೋಗ್ಯ ಶಿಬಿರ ಏರ್ಪಡಿಸಿ ಅವರಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವ ಮತ್ತು ಮಹಿಳೆಯರ ಮುಟ್ಟಿನ ಕಪ್ ಗಳನ್ನು ವಿತರಿಸುವ ಅರ್ಥಪೂರ್ಣ ಕೆಲಸ ಮಾಡುತ್ತಿದ್ದು ಅವರನ್ನು ಈ ವೇಳೆ ಮನದುಂಬಿ ಅಭಿನಂದಿಸುತ್ತೇನೆ.
ಮನುಷ್ಯನಿಗೆ ಎಲ್ಲ ಸಂಗತಿಗಳಿಗಿಂತಲೂ ಆರೋಗ್ಯವೇ ಮಿಗಿಲಾದ ವಿಷಯವಾಗಿದ್ದು ಈ ದಿಸೆಯಲ್ಲಿ ನಾವೆಲ್ಲರೂ ಜಾಗರೂಕತೆಯಿಂದ ಇರಬೇಕು. ಆರೋಗ್ಯದಿಂದ ಇದ್ದರೆ ನಾವು ಎಲ್ಲಾ ಸಾಮಾಜಿಕ ಸದ್ಗುಣಗಳನ್ನು ಸಹಿಸಬಲ್ಲೆವು. ಹೀಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂಬ ಜೇಮ್ಸ್ ಫ್ರಾಂಕ್ಲಿನ್ ಅವರ ಮಾತನ್ನು ಸಚಿವರು ಈ ವೇಳೆ ನೆನೆದರು. ಇದನ್ನೂ ಓದಿ: ಪ್ರತಿಯೊಬ್ಬ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡುವುದು ನಮ್ಮೆಲ್ಲರ ಜವಾಬ್ದಾರಿ: ಎಂ ಸತೀಶ್ ರೆಡ್ಡಿ
ಓರ್ವ ವೈದ್ಯನಾಗಿ ಆರೋಗ್ಯದ ವಿಷಯದಲ್ಲಿ ನಾನೂ ಕೂಡಾ ಹೆಚ್ಚಿನ ಕಾಳಜಿ ವಹಿಸುತ್ತೇನೆ ಮತ್ತು ಅದನ್ನೇ ಎಲ್ಲರಿಗೂ ಸಲಹೆ ನೀಡಲು ಬಯಸುತ್ತೇನೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ರಾಜ್ಯದ ಇತರೆ ಶಾಲೆಗಳಿಗಿಂತ ಶೈಕ್ಷಣಿಕವಾಗಿ ಮುಂದಿದ್ದು ಅಧಿಕಾರಿಗಳ ಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಸಚಿವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
