ಬೆಂಗಳೂರು: ರಾಜ್ಯದ ಪ್ರತಿಯೊಂದು ಶಾಲೆಗಳಲ್ಲಿಯೂ ಪರಿಸರ, ಹವಾಮಾನ ವೈಪರೀತ್ಯ ಜಾಗೃತಿ ಕ್ಲಬ್ ಗಳನ್ನು ಕಡ್ಡಾಯವಾಗಿ ರಚನೆ ಮಾಡಬೇಕು ಎಂದು ಆದೇಶ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಶ್ವ ಪರಿಸರ ದಿನದ ಅಂಗವಾಗಿ ಇಂದು (ಮಂಗಳವಾರ ಜೂ. 17) ರಂದು ಹಮ್ಮಿಕೊಂಡಿದ್ದ ಮ್ಯಾರಥಾನ್ ಗೆ ವಿಧಾನಸೌಧದ ಎದುರು ಚಾಲನೆ ನೀಡಿ ಮಾತನಾಡಿದ ಅವರು, ಕನಿಷ್ಠ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಈ ಜಾಗೃತಿ ಕ್ಲಬ್ ಗಳನ್ನು ರಚನೆ ಮಾಡಬೇಕು. ಪ್ರಕೃತಿ ಉಳಿಸುವ ದೊಡ್ಡ ಹೋರಾಟದ ಹಾಗೂ ಜಾಗೃತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಬೇಕು ಎಂದು ಈ ಆದೇಶ ಮಾಡಲಾಗಿದೆ. ಒಂದೊಂದು ಶಾಲೆ ಮರ ಬೆಳೆಸಲು ಆಯಾಯ ಪ್ರದೇಶಗಳನ್ನು ದತ್ತು ಪಡೆಯಬೇಕು ಎಂದು ತಿಳಿಸಿದರು.
ಹಸಿರು ಮತ್ತು ಸ್ವಚ್ಚತೆ ಇದೇ ನಮ್ಮ ಸರ್ಕಾರದ ಧ್ಯೇಯ. ಇದರ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದು ಸರ್ಕಾರದ ಕರ್ತವ್ಯ. ಕರ್ನಾಟಕದ ದೊಡ್ಡ ಆಸ್ತಿಯೇ ನಮ್ಮ ಪ್ರಕೃತಿ. ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶ, ಜವಾಬ್ದಾರಿಯಾಗಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿ ಒಂದೊಂದು ಸಸಿಯನ್ನು ದತ್ತು ಪಡೆಯಬೇಕು ಎಂದು ತಿಳಿಸಲಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಪ್ರಕ್ರಿಯೆಯಲ್ಲಿ ಇದ್ದಾರೆ. 2 ದಿನದ ಹಿಂದೆ ದೆಹಲಿ, ಅಹಮದಾಬಾದ್ ನಲ್ಲಿ ಇದ್ದೆ ಅಲ್ಲಿನ ಉಷ್ಣಾಂಶ ಹತ್ತಿರತ್ತಿರ 49 ಡಿಗ್ರಿಯಿತ್ತು. ಬೆಂಗಳೂರಲ್ಲಿ 22- 23 ಇದೆ. ಈ ವಾತಾವರಣ ನಮ್ಮ ಕರ್ನಾಟಕದ, ಬೆಂಗಳೂರಿನ ಆಸ್ತಿ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಯವರು ಇರುವುದೇ ಹೆಣದ ಮೇಲೆ ರಾಜಕೀಯ ಮಾಡಲು: ಡಿಸಿಎಂ ಡಿಕೆಶಿ
ಮನುಷ್ಯ ಹಾಗೂ ಅವನ ಜೀವನ ಪದ್ಧತಿ ಪ್ರಕೃತಿಯ ಜೊತೆ ಬೆಸೆದುಕೊಂಡಿದೆ. ನಾವೆಲ್ಲರೂ ಪರಿಸರದ ಒಂದು ಭಾಗವಷ್ಟೇ. ಶುದ್ದ ಗಾಳಿ, ನೀರು, ಪರಿಸರ ನಿರ್ಮಾಣ ನಮ್ಮೆಲ್ಲರ ಅತಿದೊಡ್ಡ ಜವಾಬ್ದಾರಿ. ಪರಿಸರ ಉಳಿಸುವ ಅರಿವು ಯುವ ಜನಾಂಗಕ್ಕೆ ಬರಬೇಕು. ಪರಿಸರ ನಮ್ಮ ಮನೆ ಅದನ್ನು ನಾಶ ಮಾಡದೇ ಇರುವಂತೆ ನಾವೆಲ್ಲರೂ ಹೆಜ್ಜೆ ಹಾಕಬೇಕಿದೆ ಎಂದರು.
