ಶಹಾಪುರ: ಈಗಿನ ಕಾಲದ ಯುದ್ಧ ಹಿಂದಿನಂತಲ್ಲ, ನಮ್ಮ ಸೇನೆಯ ಬಲಾಢ್ಯ ತಾಂತ್ರಿಕತೆ ಹಾಗೂ ತಂತ್ರಗಾರಿಕೆಯಿಂದ ಆಪರೇಷನ್ ಸಿಂಧೂರ್ ಗೆಲುವು ಸಾಧ್ಯವಾಗಿದೆ. ಸೇನೆಯ ಕಾರ್ಯಚರಣೆ ಬಗ್ಗೆ ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡೋಣ ಎಂದು ಮಾಜಿ ಸೈನಿಕ ಸಿದ್ದಣಗೌಡ ಹೇಳಿದರು.
ನಗರದ ಸಿಬಿ ಕಮಾನ್ನಿಂದ ಬಸವೇಶ್ವರ ವೃತ್ತದ ವರೆಗೆ ನಡೆದ ತಿರಂಗಾ ಯಾತ್ರೆಯಲ್ಲಿ (ಶುಕ್ರವಾರ ಮೇ 23) ರಂದು ಪಾಲ್ಗೊಂಡು ಮಾತನಾಡಿದ ಅವರು, ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಚರಣೆಯನ್ನು ಇಡೀ ಜಗತ್ತು ಅಚ್ಚರಿಯಿಂದ ನೋಡುವಂತಾಗಿದೆ. ಆ ಮಟ್ಟಿಗೆ ನಮ್ಮ ಯೋಧರು ಕಾರ್ಯಚರಣೆ ನಡೆಸಿದ್ದಾರೆ. ಉಗ್ರರ ದಾಳಿಗೆ ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಅದರಲ್ಲಿ ಅನೇಕ ಮಹಿಳೆಯರು ತಮ್ಮ ಸಿಂಧೂರವನ್ನು ಕಳೆದು ಕೊಂಡಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಚರಣೆ ಮಾಡಿ ನೂರಾರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಪ್ರತಿಕಾರ ತೀರಿಸಿಕೊಂಡಿದೆ ಎಂದು ಹೇಳಿದರು.
ವೀರಯೋಧರ ಗುಣಗಾನ
ದೇಶಭಕ್ತಿಯ ಸಾಹಿತ್ಯದೊಂದಿಗೆ ವೀರಯೋಧರನ್ನು ಗುಣಗಾನ ಮಾಡುವ ಹಾಡಿನೊಂದಿಗೆ ಹಿರಿಯರು, ಯುವಕರು, ಮಹಿಳೆಯರು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ದೇಶಪ್ರೇಮ ಮೆರೆದರು. ಮೆರವಣಿಗೆಯಲ್ಲಿ ಭಾಗವಹಿಸಿದ ರಾಷ್ಟ್ರಾಭಿಮಾನಿಗಳು ಕೈಯಲ್ಲಿ ತ್ರಿವರ್ಣ ಪತಾಕೆ ಹಿಡಿದು, ಭಾರತೀಯ ಸೇನೆ ಭಾರತ ಮಾತೆಗೆ ಜೈಕಾರ ಹಾಕಿ ಸಂಭ್ರಮಿಸಿದರು. ಇದನ್ನೂ ಓದಿ: ಡಿಕೆ ಬ್ರದರ್ಸ್ ಗೆ ಎದುರಾಗುತ್ತಾ ಇಡಿ ಸಂಕಷ್ಟ!?
ಈ ಸಂದರ್ಭದಲ್ಲಿ ಸೂಗೂರೇಶ್ವರ ಶಿವಾಚಾರ್ಯರು, ಶರಣು ಗದ್ದುಗೆ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಹೊನ್ನರೆಡ್ಡಿ ವಕೀಲರು, ಬಿಎಸ್ಎಫ್ ಯೋಧ ದುರ್ಗಪ್ಪ ನಾಯಕ್, ಬಿಜೆಪಿ ಮುಖಂಡ ಅಮೀನರೆಡ್ಡಿ ಯಾಳಗಿ, ಮರೆಪ್ಪ ಪ್ಯಾಟಿ, ಚಂದ್ರು ಯಾಳಗಿ, ಭೀಮಣ್ಣ ಶಖಾಪುರ,ರಾಜೂ ಗೂಗಲ್, ದೇವಿಂದ್ರಪ್ಪ ನಾಶಿ, ಗುರು ಕಾಮಾ, ಭಾರತಿ ಜಮಖಂಡಿ, ಇಂದ್ರ ಉಪ್ಪೀನ್, ನಿರ್ಮಲಾದೇವಿ, ಶಿವಲೀಲಾ ಸೇರಿದಂತೆ ಮಹಿಳೆಯರು, ಪಕ್ಷಾತೀತವಾಗಿ ಎಲ್ಲಾ ಮುಖಂಡರು, ಯುವಕರು ಪಾಲ್ಗೊಂಡಿದ್ದರು.
