ಹಾವೇರಿ: ಹಾವೇರಿ ಮೂಲದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನೊಬ್ಬನು ಪ್ರಯಾಣಿಕರು ಇರುವಾಗಲೇ ಬಸ್ ನಿಲ್ಲಿಸಿ ಪ್ರಯಾಣಿಕರ ಮಧ್ಯೆ ಸೀಟ್ ಮೇಲೆ ನಮಾಜ್ ಮಾಡಿರುವ ವಿಡಿಯೋ ಒಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲಾಗುತ್ತಿದ್ದು, ಈ ಕುರಿತಂತೆ ಸಾರಿಗೆ ಇಲಾಖೆಯು ಚಾಲಕನ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೌದು, KSRTC Bus ಚಾಲಕನೊಬ್ಬ ರಸ್ತೆ ಮಧ್ಯದಲ್ಲಿ ಬಸ್ ನಿಲ್ಲಿಸಿ, ಸೀಟಿನಲ್ಲಿ ಕುಳಿತು ನಮಾಜ್ ಮಾಡಿದ ನಂತರ ತೀವ ವಿವಾದ ಭುಗಿಲೆದ್ದಿತು. ಈ ಅನಿರೀಕ್ಷಿತ ಘಟನೆಯಿಂದಾಗಿ ಪ್ರಯಾಣದಲ್ಲಿದ್ದ ಪ್ರಯಾಣಿಕರು ಅಸಹಾಯಕರಾಗಿ ಕಾಯಬೇಕಾಯಿತು. ನಮಾಜ್ ಮುಗಿಯುವವರೆಗೂ ಚಾಲಕ ಬಸ್ ಸ್ಮಾರ್ಟ್ ಮಾಡದ ಕಾರಣ ಪ್ರಯಾಣಿಕರಲ್ಲಿ ಕೋಪ ಹೆಚ್ಚಾಯಿತು. ಏಪ್ರಿಲ್ 29ರಂದು ಹುಬ್ಬಳ್ಳಿಯಿಂದ ಹಾವೇರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಈ ಘಟನೆ ನಡೆದಿದ್ದು, ಕೆಲವು ಪ್ರಯಾಣಿಕರು ಈ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಅದು ವೈರಲ್ ಆಗಿತ್ತು.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಅವರಿಗೆ ಪತ್ರ ಬರೆದಿದ್ದಾರೆ.
ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕೆಲವೊಂದು ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿದ್ದರೂ ಸಹ ಸಾರ್ವಜನಿಕ ಸೇವೆಯಲ್ಲಿರುವವರು, ಕರ್ತವ್ಯದ ವೇಳೆ ಹೊರತುಪಡಿಸಿ ತಮ್ಮ ತಮ್ಮ ಧರ್ಮವನ್ನು ಪಾಲಿಸಬಹುದಾಗಿರುತ್ತದೆ. ಆದರೆ, ಕರ್ತವ್ಯದ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಬಸ್ ನಿಲ್ಲಿಸಿ, ಬಸ್‌ನಲ್ಲಿ ಪ್ರಯಾಣಿಕರು ಇದ್ದಾಗ್ಯೂ ಸಹ ನಮಾಜ್ ಮಾಡಿರುವುದು ಆಕ್ಷೇಪಾರ್ಹ. ಇದನ್ನೂ ಓದಿ: ಶಿವನನ್ನು ಒಲಿಸಿಕೊಳ್ಳಲು ಆಡಂಬರ, ಡಾಂಭಿಕತೆ ಅವಶ್ಯಕತೆ ಇಲ್ಲ: ಪಿ.ಎನ್.ರವೀಂದ್ರ
ಈ ವಿಡಿಯೋ ಬಗ್ಗೆ ಕೂಡಲೇ ತನಿಖೆ ನಡೆಸಿ, ಸಂಬಂಧಪಟ್ಟ ಸಿಬ್ಬಂದಿಯು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಸೂಕ್ತ ಶಿಸ್ತಿನ ಕ್ರಮ ಜರುಗಿಸಿ. ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಎಂದು ಸೂಚನೆ ನೀಡಿದ್ದಾರೆ.
ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ ಕೆಲವು ಜನ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಇನ್ನೂ ಕೆಲ ಜನ ಇದರ ವಿರುದ್ಧವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
