ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ, ಇಂದು ಶನಿವಾರ ಏ.26 ರಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಮೊಹಮ್ಮದ್ ರಿಜ್ವಾನ್ ನವಾಬ್, ಮಾನ್ಯ ಉಪಾಧ್ಯಕ್ಷರು, ಕರಾರಸಾ ನಿಗಮರವರು, ನಿಗಮದ ವಿವಿಧ ಪರಿಹಾರ ಯೋಜನೆ ಅಡಿ ಸಿಬ್ಬಂದಿ ಹಾಗೂ ಸಿಬ್ಬಂದಿಗಳ ಅವಲಂಭಿತರಿಗೆ ಪರಿಹಾರ ಮೊತ್ತದ ಚೆಕ್ ವಿತರಿಸಿದರು.
ಅಪಘಾತದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವರು ಸಾಂತ್ವಾನ ಹೇಳಿ, ಸಿಬ್ಬಂದಿಗಳ ಜೀವ ಅಮೂಲ್ಯವಾದದ್ದು, ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ, ಆದರೆ ಅವರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು. ಇದನ್ನೂ ಓದಿ:
ಸಾರಿಗೆ ಸಿಬ್ಬಂದಿಗಳು ಹಗಲು – ಇರಳು ಸಂಸ್ಥೆಗಾಗಿ ಶ್ರಮಿಸಿರುವುದರಿಂದ ಸಾರಿಗೆ ಸಂಸ್ಥೆಯು ಇಂದು ಉನ್ನತ ಸ್ಥಾನದಲ್ಲಿರುತ್ತದೆ. ಮೃತ ಸಿಬ್ಬಂದಿಗಳ ಕುಟುಂಬವನ್ನು ನೋಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮೃತರ ಅವಲಂಬಿತರಿಗೆ ಈಗಾಗಲೇ ನಾಲ್ಕು ನಿಗಮಗಳಲ್ಲಿ ಅನುಕಂಪದ ಆಧಾರದ ಮೇಲೆ 1000 ನೌಕರಿ ನೀಡಿರುವುದಾಗಿ ತಿಳಿಸಿದರು.
ಇಂದು ವಿತರಿಸಲಾಗಿರುವ ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಮಕ್ಕಳ ವಿದ್ಯಾಬ್ಯಾಸ, ಮನೆ ನಿರ್ಮಾಣ ಮತ್ತು ಇತರೆ ಶುಭ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಬಡ್ಡಿ ವ್ಯಾಮೋಹಕ್ಕೆ ಒಳಗಾಗಿ ಪರಿಹಾರ ಧನವನ್ನು ಯಾರಿಗೂ ನೀಡದಂತೆ ಕಿವಿ ಮಾತು ಹೇಳಿದರು. ಹಣವಿದ್ದರೆ ಎಲ್ಲರು ನೆಂಟರೆ ಆದರೆ ಸೂಕ್ತವಾದ ರೀತಿಯಲ್ಲಿ ಹಣ ಬಳಕೆ ಮಾಡಿಕೊಳ್ಳಲು ತಿಳಿಸಿದರು.
ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ “ಕೆಎಸ್ ಆರ್ ಟಿಸಿ ಆರೋಗ್ಯ” ಯೋಜನೆಯನ್ನು ಕೂಡ ಜಾರಿಗೆ ತಂದಿದ್ದು, ರಾಜ್ಯಾದಾದ್ಯಂತ 300 ಕ್ಕೂ ಅಧಿಕ ಆಸ್ಪತ್ರೆಗಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಟ್ಟಿದ್ದು, ಈವರೆಗೂ 56,000 ಕ್ಕೂ ಹೆಚ್ಚು ಸಿಬ್ಬಂದಿ/ಅವಲಂಬಿತರು ಚಿಕಿತ್ಸೆ ಪಡೆದಿರುವುದಾಗಿ ತಿಳಿಸಿದರು.
ಇದೇ ಪ್ರಪ್ರಥಮ ಬಾರಿಗೆ ನಿಗಮದ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪಘಾತಕ್ಕೆ ಒಳಪಟ್ಟು, ಬಲಗಾಲಿನ ಮಂಡಿಯ ಕೆಳಗೆ ಕಾಲನ್ನು ಕಳೆದುಕೊಂಡ ಸುನಿಲ್ ಕುಮಾರ್ ಬಿ.ಡಿ., ಚಾಲಕ-ಕಂ-ನಿರ್ವಾಹಕ, ಬಿಲ್ಲೆ ಸಂಖ್ಯೆ. 1624, ಅರಕಲಗೂಡು ಘಟಕ, ಹಾಸನ ವಿಭಾಗ ರವರಿಗೆ ಪರಿಹಾರವಾಗಿ ರೂ.25.00 ಲಕ್ಷಗಳನ್ನು ವಿತರಿಸಲಾಯಿತು. ಇದಲ್ಲದೆ ಅವರಿಗೆ ದಿನಾಂಕ: 25-03-24 ರಿಂದ 09-12-24 ರವರೆಗೆ 08 ತಿಂಗಳು 14 ದಿನಗಳ ಅವಧಿಗೆ ಐ.ಓ.ಡಿ ನೀಡಲಾಗಿದೆ.
ಸಂಸ್ಥೆಯ ವತಿಯಿಂದ ಪೂರ್ಣ ವೈದ್ಯಕೀಯ ವೆಚ್ಚ ರೂ.4,85,762-00 ಗಳನ್ನು ಭರಿಸಲಾಗಿದೆ ಹಾಗೂ ಸದರಿ ನೌಕರರಿಗೆ ಲಘು ಹುದ್ದೆ ನೀಡಿ ತಾಂತ್ರಿಕ ಸಹಾಯಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾದವರಿಗೆ ನೇಮಕಾತಿ ಪತ್ರ ವಿತರಣೆ
ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ.
ಇದುವರೆವಿಗೂ 24 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ. ಇಂದು, ಕರ್ತವ್ಯದಲ್ಲಿರುವಾಗ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಇಬ್ಬರು ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ. 1 ಕೋಟಿ ಚೆಕ್ ನೀಡಲಾಗಿದೆ. ಈವರೆಗೂ 26 ಸಿಬ್ಬಂದಿಗಳ ಅವಲಂಭಿತರಿಗೆ ಒಟ್ಟಾರೆ ರೂ.26 ಕೋಟಿ ಪರಿಹಾರ ನೀಡಲಾಗಿದೆ.
