ದುಬೈ: ಅನಿವಾಸಿ ಕನ್ನಡಿಗರ ಯುವ ಪೀಳಿಗೆಯನ್ನು ಕನ್ನಡ ಭಾಷಾ ಸಾಕ್ಷರರನ್ನಾಗಿಸುವ ಉದ್ದೇಶದಿಂದ “ಕನ್ನಡ ಮಿತ್ರರು ಯು.ಎ.ಇ” ಕಳೆದ 11 ವರ್ಷಗಳಿಂದ ಉಚಿತವಾಗಿ ನಡೆಸುತ್ತಿರುವ “ಹೊರನಾಡು ಕನ್ನಡ ಪಾಠ ಶಾಲೆ ದುಬೈ” ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಪಾಠ ಶಾಲೆಯಾಗಿದೆ, ಪ್ರಸ್ತುತವಾಗಿ 1250 ಮಕ್ಕಳಿಗೆ ದುಬೈನಲ್ಲಿ ಕನ್ನಡ ಭಾಷೆ ಕಲಿಸಲಾಗುತ್ತಿದೆ.
ಕನ್ನಡ ಮಿತ್ರರು ಯುಎಇ ಎಂಬ ಹೆಸರಿನಡಿಯಲ್ಲಿ ಮಿತ್ರರ ಬಳಗವನ್ನೆಲ್ಲಾ ಸೇರಿಸಿಕೊಂಡು ಕನ್ನಡ ಪಾಠ ಶಾಲೆ ದುಬೈ ಆರಂಭಿಸಿದ್ದರು. ಕೇವಲ 45 ವಿದ್ಯಾರ್ಥಿಗಳಿಂದ ನಾಂದಿ ಹಾಡಿದ ಕನ್ನಡ ಪಾಠ ಶಾಲೆ ಇದೀಗ 1250 ವಿದ್ಯಾರ್ಥಿ ಬಳಗವನ್ನು ಹೊಂದಿರುವುದು ಹೆಮ್ಮೆಯ ಸಂಗತಿ.
ಶ್ರೀಮಂತ ರಾಷ್ಟ್ರ ಎಂದೇ ಕರೆಸಿಕೊಳ್ಳುವ ದುಬೈನಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವ ಕನ್ನಡ ಪಾಠ ಶಾಲೆ, ಮಕ್ಕಳಿಗೆ ವರ್ಣಮಾಲೆ, ಸಂಖ್ಯೆ, ಪುಟಾಣಿ ಸಾಹಿತ್ಯ, ಸುಲಭ ಪದಗಳು, ವಾಕ್ಯ ರಚನೆ ಸೇರಿದಂತೆ ಪ್ರಬಂಧ ಬರವಣಿಗೆ, ಸಾಹಿತ್ಯ ಎಲ್ಲವೂ ಮಕ್ಕಳಿಗೆ ಧಾರೆಯೆರೆಯುತ್ತಿದೆ.
ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪುರವರ ವಾಣಿಯನ್ನು ಅಕ್ಷರಶಃ ಸಾಬೀತು ಪಡಿಸುವಲ್ಲಿ ಮುಂದಾಗಿರುವ ಕನ್ನಡ ಪಾಠ ಶಾಲೆ ಇದೇ ಏ.27 ರಂದು ದುಬೈನ ಅಲ್ ನಾಸರ್ ಲೀಶರ್ ಲ್ಯಾಂಡ್ ಊದ್ ಮೆಥಾದಲ್ಲಿ 11 ನೇ ವಾರ್ಷಿಕೋತ್ಸವ ಸಮಾರಂಭವನ್ನು ಏರ್ಪಡಿಸಿದೆ ಎಂದು ಕನ್ನಡ ಪಾಠ ಶಾಲೆ ದುಬೈನ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾದವರಿಗೆ ನೇಮಕಾತಿ ಪತ್ರ ವಿತರಣೆ
ಇದೇ ವೇಳೆ ಮಾತನಾಡಿದ ಶಶಿಧರ್ ನಾಗರಾಜಪ್ಪನವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್ ತಂಗಡಗಿಯವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ವಿಶೇಷವೆಂದರೆ ನಮ್ಮ ಶಾಲೆಯ ಮಕ್ಕಳು ಮತ್ತು ಶಿಕ್ಷಕಿಯರು ಸಂಪೂರ್ಣ ಕಾರ್ಯಕ್ರಮಗಳನ್ನು ಕನ್ನಡ ಭಾಷೆಯಲ್ಲಿ ನಡೆಸಿಕೊಡಲಿದ್ದಾರೆ.
ಶಾಲೆಯ 1250ಕ್ಕೂ ಹೆಚ್ಚು ಮಕ್ಕಳಿಂದ ದುಬೈನಲ್ಲಿ ಐತಿಹಾಸಿಕ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಲು ದುಬೈನಲ್ಲಿ ನೆಲೆಸಿರುವ ಕನ್ನಡಿಗರಿಗೆ ಮುಕ್ತವಾಗಿ ಆಹ್ವಾನಿಸಿದ್ದಾರೆ.
