ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಡೀಸೆಲ್, ಪೆಟ್ರೋಲ್ ಹಾಗೂ ಎಲ್ಪಿಜಿ ಗ್ಯಾಸ್ ಬೆಲೆಯನ್ನು ಏರಿಸುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಕೈಗೊಂಡಿದ್ದರು.
ಕಾಂಗ್ರೆಸ್ನ ಪ್ರತಿಭಟನೆಯ ಕುರಿತಾಗಿ ಇದೀಗ ನಿಖಿಲ್ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ ಅನಿಸುತ್ತದೆ ಎಂದು ಟಾಂಗ್ ನೀಡಿದ್ದಾರೆ.
ಈ ಕುರಿತು ನಗರದಲ್ಲಿದ್ದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ ಎಷ್ಟು ಇತ್ತು ಎಂದು ಕಾಂಗ್ರೆಸ್ ಸ್ನೇಹಿತರು ಮೊದಲು ನೋಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
2004ರಿಂದ 2014ರವರೆಗೆ ಕಾಂಗ್ರೆಸ್ನ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ ಅನ್ನಿಸುತ್ತದೆ. ಯುಪಿಎ ಅಧಿಕಾರದಲ್ಲಿದ್ದಾಗ ಒಂದು ಎಲ್ಪಿಜಿ ಸಿಲಿಂಡರ್ನ ಬೆಲೆ 1,241 ರೂ. ಇತ್ತು. ಈಗ ನರೇಂದ್ರ ಮೋದಿ ಸರ್ಕಾರದಲ್ಲಿ 854 ರೂ. ಇದೆ. 50 ರೂ. ಜಾಸ್ತಿ ಮಾಡಿದ ಮೇಲೆಯೂ ಗ್ಯಾಸ್ ಬೆಲೆ 850 ರೂ. ಮಾತ್ರ ಇದೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಕ್ಯಾಬಿನೆಟ್ ಸಚಿವರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. ಜನರಿಗೆ ತೆರಿಗೆ ಟ್ರ್ಯಾಪ್ ಮಾಡಿದ್ದಾರೆ. ಪ್ರಭಾವಿ ಸಚಿವರು ಸದನದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 16ನೇ ಬಜೆಟ್ ಮಂಡಿಸಿರುವ ಸಿದ್ರಾಮಣ್ಣ ಅವ್ರು ಎರಡು ವರ್ಷಗಳಲ್ಲಿ 2.25 ಕೋಟಿ ಸಾಲ ಮಾಡಿದ್ದಾರೆ. ಸಾಲ ತೆಗೆದುಕೊಂಡಿರೋದು ತಪ್ಪು ಅಂತ ನಾನು ಹೇಳಿಲ್ಲ. ಐತಿಹಾಸಿಕ ಬಜೆಟ್ ಮಂಡಿದ್ದೇವೆ ಅಂತ ಅವ್ರ ಪಕ್ಷದವರು ಬೆನ್ನು ತಟ್ಟಿಕೊಂಡ್ರಿ. ಸಾಲ ಮಾಡಿ ರಾಜ್ಯದ ಜನತೆ ಮೇಲೆ ಎಷ್ಟು ಹೊರೆ ಹಾಕಿದ್ದೀರಾ.ಆ ಸಾಲದ ಹಣದಿಂದ ಎನಾದ್ರು ಮೂಲಸೌಕರ್ಯ ಅಭಿವೃದ್ಧಿ ಗೆ ಬಳಸಿಕೊಳ್ಳಿದ್ದೀರಾ!? ಸಾಲವನ್ನು ಅಭಿವೃದ್ಧಿ ದೃಷ್ಟಿಯಿಂದ ಮಾಡಿದ್ದೀರಾ!? ಅಥವಾ ನೀವು ಸುಳ್ಳು,ಡೊಳ್ಳು ಯೋಜನೆಗಳಿಗೆ ಕೊಟ್ಟಿದ್ದೀರಾ ಇದನ್ನ ಮೊದಲು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
