ಬೆಂಗಳೂರು: ಬಿಜೆಪಿ ಕಾರ್ಯಕರ್ತನೊಬ್ಬನು ಬೆಂಗಳೂರು ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದ್ದು, 35 ವರ್ಷದ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತ.
ವಿನಯ್ ಸೋಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾಗಿರುವ ಕಾರಣಕ್ಕೋಸ್ಕರ ಮನನೊಂದ ವಿನಯ್ ಅವರು ನಾಗವಾರದ ಬಿಜೆಪಿ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಸಾವಿಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿದ್ದಾರೆ. ರಾಜಕೀಯ ಪ್ರೇರಿತ ಎಫ್ಐಆರ್ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ವಿನಯ್ ಸೋಮಯ್ಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಬಗ್ಗೆ ಅಪಹಾಸ್ಯ ಮಾಡಿ ವಾಟ್ಸಪ್ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭಾ ಅಂಗೀಕಾರ ಐತಿಹಾಸಿಕ ಕ್ಷಣ: ವಿಜಯೇಂದ್ರ
ಈ ಪೋಸ್ಟ್ ವಿರುದ್ಧ ಕಾಂಗ್ರೆಸ್ ಮುಖಂಡ ತನ್ನೀರ ಮೈನಾ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿನಯ್ ಸೋಮಯ್ಯ ಅವರನ್ನು ಪೊಲೀಸರು 2 ತಿಂಗಳ ಹಿಂದೆ ಬಂಧಿಸಿದ್ದರು. ಬಂಧನದ ಬಳಿಕ ಬಹಳ ಮನನೊಂದಿದ್ದ ವಿನಯ್ ಇಂದು (ಗುರುವಾರ ಏ. 04) ರಂದು ಮುಂಜಾನೆ 4:30ರ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ವಿನಯ್ ಆತ್ಮಹತ್ಯೆ ಕುರಿತಾಗಿ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಡೆತ್ ನೋಟ್ ಬರೆದು ಹರಿ ಬಿಟ್ಟಿರುವುದು ಕಾಂಗ್ರೆಸ್ಸಿಗರಿಗೆ ಢವಢವ ಶುರುವಾದಂತಾಗಿದೆ.
