ಬೆಂಗಳೂರು: ಕರ್ನಾಟಕ ಬಿಜೆಪಿ ಪಕ್ಷದಲ್ಲಿ ಹೊಂದಾಣಿಕೆ ಇಲ್ಲದಿರುವುದರಿಂದ ಪಕ್ಷದಲ್ಲಿಯೇ ಭಿನ್ನಮತಗಳು ಮೂಡಿರುವುದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ.
ಇನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಿರುಗಿಬಿದ್ದಿದ್ದ ಕಾರಣ ಇದೀಗ ಯತ್ನಾಳ್ ಅವರಿಗೆ ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಇದನ್ನೂ ಓದಿ: ಮೋದಿ ಮುಸ್ಲಿಮರಿಗೆ ಮೀಸಲಾತಿ ಕೊಟ್ರೆ ಅದು ಸರಿ, ನಾವು ಕೊಟ್ರೆ ತಪ್ಪಾ?: ಯತೀಂದ್ರ
ಹೌದು, ಮಾರ್ಚ್ 26 ಬುಧವಾರದಂದು ಯತ್ನಾಳ್ ಸೇರಿ ಇನ್ನೂ ಐದು ಜನರಿಗೆ ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದ್ದು ಇದರಿಂದ ಯತ್ನಾಳ್ ಅವರ ಶಾಸಕರ ಸ್ಥಾನದ ಮೇಲೆ ಕೂಡ ಪರಿಣಾಮ ಬೀಳಲಿದೆ.
ಇನ್ನು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಉಚ್ಛಾಟನೆ ಮಾಡಿ ಮಾರ್ಚ್ 26 ಆದೇಶ ಹೊರಡಿಸಿದೆ. ಕಳೆದ ಫೆಬ್ರವರಿ 10ರಂದು ಕೇಂದ್ರೀಯ ಶಿಸ್ತು ಸಮಿತಿ ಯತ್ನಾಳ್ಗೆ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ನೀಡಿದ ಬಳಿಕವೂ ಪಕ್ಷದ ಶಿಸ್ತನ್ನ ಉಲ್ಲಂಘಿಸಲಾಗಿದೆ ಎಂದು ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ರದ್ದುಗೊಳಿಸಿ ಇಲ್ಲಿವರೆಗೂ ಯತ್ನಾಳ್ ಹೊಂದಿದ್ದ ಎಲ್ಲಾ ಪಕ್ಷದ ಹುದ್ದೆಗಳಿಂದಲೂ ಗೇಟ್ಪಾಸ್ ನೀಡಲಾಗಿದೆ.
