ಬೆಂಗಳೂರು: ‘ಒಂದು ದೇಶ ಒಂದು ಚುನಾವಣೆ’ ಕುರಿತ ಸಂವಾದ ಕಾರ್ಯಕ್ರಮವು ಇಂದು (ಶುಕ್ರವಾರ ಮಾ. 07) ರಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿಧಾನಸೌಧದ ಕಚೇರಿಯಲ್ಲಿ ನಡೆಸಿದರು.
ವಿಧಾನಪರಿಷತ್ತಿನ ಸದಸ್ಯ ಕೆ.ಎಸ್.ನವೀನ್ ಅವರು ಒಂದು ದೇಶ ಒಂದು ಚುನಾವಣೆ ಇಂದಿನ ಅನಿವಾರ್ಯತೆ ಎಂದು ತಿಳಿಸಿದರು. ಈ ಕ್ರಮದಿಂದ ಚುನಾವಣೆಗೆ ಬೇಕಾದ ಅನಗತ್ಯ ಹಣಕಾಸಿನ ವೆಚ್ಚವನ್ನು ತಡೆಯಬಹುದು ಮತ್ತು ಮಾನವ ಸಂಪನ್ಮೂಲ, ಸರಕಾರಿ ಅಧಿಕಾರಿ, ಸಿಬ್ಬಂದಿಗಳ ಬಳಕೆಯ ವಿಚಾರದಲ್ಲೂ ಪ್ರಯೋಜನ ಲಭಿಸಲಿದೆ ಎಂದು ವಿವರಿಸಿದರು. ಇತರ ದೇಶದಲ್ಲೂ ಇಂಥ ಕ್ರಮವನ್ನು ಅನುಸರಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರಕಾರ: ಬಿ. ವೈ. ವಿ
‘ಒಂದು ದೇಶ ಒಂದು ಚುನಾವಣೆಯ ಮಹತ್ವ, ಖರ್ಚುವೆಚ್ಚ, ಇದರ ಪ್ರಯೋಜನ ಕುರಿತು ಕೆ.ಎಸ್.ನವೀನ್ ಅವರು ಬೆಳಕು ಚೆಲ್ಲಿದರು. ಇದೇವೇಳೆ ವಿಧಾನಪರಿಷತ್ತಿನ ಸದಸ್ಯರು ತಮಗೆ ಇರುವ ಸಂದೇಹಗಳನ್ನು ಪ್ರಶ್ನೆಗಳ ಮೂಲಕ ಪರಿಹರಿಸಿಕೊಂಡರು.
ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಮಾತ್ರವಲ್ಲದೆ ಪ್ರಬುದ್ಧರು, ವಕೀಲರ ಜೊತೆಗೂಡಿ ಇದರ ಕುರಿತಾಗಿ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲೆಗಳು, ತಾಲ್ಲೂಕುಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಾಗಾರ ಮತ್ತು ಸಂವಾದ ನಡೆಸುವ ಕುರಿತು ಇದೇವೇಳೆ ಚರ್ಚಿಸಲಾಯಿತು.
