5 ಗ್ಯಾರಂಟಿ ಜಾರಿ ಇಕ್ಕಟ್ಟು: ಬಿಜೆಪಿ ಪಕ್ಷಕ್ಕೆ ವಿಳಂಬವೇ ಅಸ್ತ್ರ!

5 ಗ್ಯಾರಂಟಿ ಜಾರಿ ಇಕ್ಕಟ್ಟು: ಬಿಜೆಪಿ ಪಕ್ಷಕ್ಕೆ ವಿಳಂಬವೇ ಅಸ್ತ್ರ!

ಬೆಂಗಳೂರು: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಘೋಷಿಸಿದ್ದು, ಸರ್ಕಾರ ರಚನೆಯಾಗಿ 15 ದಿನ ಕಳೆದರೂ ಯಾವುದೇ ಗ್ಯಾರಂಟಿಗಳನ್ನು ಜಾರಿ ಮಾಡದಿದ್ದ ಕಾರಣಕ್ಕೆ ಪ್ರತಿಪಕ್ಷದ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಹರಿಯಾದಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರ ನಿರ್ವಹಿಸಿದ್ದ 5 ಗ್ಯಾರಂಟಿಗಳ ಜಾರಿ ಸದ್ಯ ಬಹುದೊಡ್ಡ ರಾಜಕೀಯ ಚರ್ಚೆಯ ವಿಷಯವಾಗುತ್ತಿದೆ. 5 ಗ್ಯಾರಂಟಿಗಳುನ್ನು ಜಾರಿಗೊಳಿಸುವ ಮೂಲಕ ಕೊಟ್ಟ ಭರವಸೆಯನ್ನು ಈಡೇರಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್‌ ಪಟ್ಟು ಹಿಡಿಯುತ್ತಿದೆ. ಈ ನಡುವೆ ಬಿಜೆಪಿ ಕೊಟ್ಟ ಭರವಸೆಯನ್ನು ಎಲ್ಲಿ ಈಡೇರಿಸಿದೆ ಎಂದು ಕಾಂಗ್ರೆಸ್ ಕೂಡಾ ಮರು ಪ್ರಶ್ನೆ ಹಾಕುತ್ತಿದೆ.

ಇನ್ನು ಕೊಟ್ಟ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿದೆ. ಈ 5 ಯೋಜನೆಗಳನ್ನು ಜಾರಿಗೊಳಿಸಲು ಬಹುತೇಕ 52 ಸಾವಿರ ಕೋಟಿಯ ಅಗತ್ಯ ಇದೆ. ಇದಕ್ಕೆ ಹಣವನ್ನು ಎಲ್ಲಿಂದ ಕ್ರೋಡೀಕರಣ ಮಾಡಲಾಗುತ್ತದೆ ಎಂಬುವುದು ಕೂಡಾ ಸಾಕಷ್ಟು ಸವಾಲಿನ ಸಂಗತಿಯಾಗಿದೆ.

ಬಿಜೆಪಿಗೆ ಅಸ್ತ್ರ

5 ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬ ವಿಚಾರ ಬಿಜೆಪಿ ಪಾಲಿಗೆ ಬಹುದೊಡ್ಡ ರಾಜಕೀಯ ಅಸ್ತ್ರವಾಗಿದೆ. ಲೋಕಸಭಾ ಚುನಾವಣೆ ಇನ್ನೇನು 2-3 ತಿಂಗಳಿನಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ 5 ಗ್ಯಾರಂಟಿ ಯೋಜನೆಗಳ ಜಾರಿ ವಿಚಾರ ಬಿಜೆಪಿಗೆ ಅಸ್ತ್ರವಾಗಲಿದೆ. ಕಾಂಗ್ರೆಸ್ ವಿರುದ್ಧ ಜನದ್ರೋಹದ ಆರೋಪವನ್ನು ಬಿಜೆಪಿ ಮಾಡುವ ಮೂಲಕ ರಾಜಕೀಯ ಲಾಭವನ್ನು ಗಿಟ್ಟಿಸಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ.

ಮತ್ತೊಂದು ಕಡೆಯಲ್ಲಿ ಕರೆಂಟ್ ಬಿಲ್ ಕಟ್ಟಬೇಡಿ, ಬಸ್‌ಗಳನ್ನು ಪ್ರಯಾಣ ಮಾಡುವ ಮಹಿಳೆಯರು ಟಿಕೆಟ್ ಕೊಡಬೇಡಿ ಎಂದು ಬಿಜೆಪಿ ನಾಯಕರು ಕರೆ ಕೊಡುತ್ತಿದ್ದಾರೆ. ಈ ಮೂಲಕ ಸರ್ಕಾರದ ವಿರುದ್ಧ ಅಭಿಯಾನವನ್ನು ಹಮ್ಮಿಕೊಳ್ಳಲು ಬಿಜೆಪಿ ಯೋಜನೆ ತಯಾರು ಮಾಡಿಕೊಳ್ಳುತ್ತಿದೆ.

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ 5 ಘೋಷಣೆಗಳ ಜಾರಿ ಮತ್ತಷ್ಟು ವಿಳಂಬ ಆದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ನಡುವೆ ದೊಡ್ಡ ಮಟ್ಟದಲ್ಲಿ ರಾಜಕೀಯ ಹೋರಾಟ ನಡೆಯುವುದು ನಿಶ್ಚಿತ.

 

Related