ಬೀದರ್: ಕಾರಂಜಾ ನೀರಾವರಿ ಯೋಜನೆಯಡಿ ಮುಳುಗಡೆಯಾದ ಪುನರ್ವಸತಿ ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಸರ್ಕಾರದಿಂದ ಇದಕ್ಕೆ ಸಮ್ಮತಿ ಪಡೆದು ಕೆಲಸ ಆರಂಭಿಸಲು ಪ್ರಯತ್ನ ನಡೆಸಲಾಗಿದೆ ಎಂದು ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ತಾಲ್ಲೂಕಿನ ನೆಲವಾಡ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದಲ್ಲಿ ಕಾರಂಜಾ ಮುಳುಗಡೆ ವ್ಯಾಪ್ತಿ ಹೆಚ್ಚಿದೆ.
ಪುನರ್ವಸತಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯರು ಸಾಕಷ್ಟು ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದಾರೆ. ಹೀಗಾಗಿ ನೆಲವಾಡ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲು 20 ಕೋಟಿ ರೂ.ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದು ಮಂಜೂರಿಯಾಗುವ ಹಂತದಲ್ಲಿದೆ ಎಂದು ತಿಳಿಸಿದರು.
ಕಾರಂಜಾ ಯೋಜನೆ ನಮ್ಮ ಜಿಲ್ಲೆಗೆ ವರದಾನವಾಗಿದೆ. ರೈತರಿಗೆ ಆರ್ಥಿಕ ಶಕ್ತಿ ತುಂಬುವ ಜೊತೆಗೆ ಬೀದರ್, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಕೇಂದ್ರ ಹಾಗೂ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿಗೆ ಮೂಲಾಧಾರವಾಗಿದೆ. ಕಾರಂಜಾ ಯೋಜನೆಗೆ ಭೂಮಿ ಕೊಟ್ಟ ರೈತರಿಗೆ ಪರಿಹಾರದಲ್ಲಿ ಆಗಿರುವ ಘೋರ ಅನ್ಯಾಯ ಸರಿಪಡಿಸಿ, ನ್ಯಾಯ ಒದಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿವೆ. ಕಾರಂಜಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾರಂಜಾಗೆ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆದಿದೆ ಎಂದರು. ಇದನ್ನೂ ಓದಿ: ಮೊರಾರ್ಜಿ ದೇಸಾಯಿ ಶಾಲೆಗೆ ಸಚಿವ ಖಂಡ್ರೆ ಭೇಟಿ
ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಶಿಕ್ಷಕರು ರಾಷ್ಟ್ರದ ನಿರ್ಮಾಪಕರು. ಪ್ರಧಾನಿ ನರೇಂದ್ರ ಮೋದಿ ಅವರು 2047 ರಲ್ಲಿ ವಿಕಸಿತ ಭಾರತ ಹಾಗೂ ವಿಶ್ವ ಗುರು ಭಾರತ ನಿರ್ಮಿಸುವ ಸಂಕಲ್ಪ ತೊಟ್ಟು ಕೆಲಸ ಮಾಡುತ್ತಿದ್ದಾರೆ. ಈ ಕನಸು ನನಸಾಗಬೇಕಾದರೆ ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ ಎಂದರು.
ಈ ವೇಳೆ ಶಾಸಕರು ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತೋಡಿದ ಕೊಳವೆಬಾವಿ ಉದ್ಘಾಟಿಸಿದರು. 20 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಿದರು.