ಬಾರದ ಲೋಕಕ್ಕೆ ಪ್ರಜಾವಾಹಿನಿ ಕಣ್ಮಣಿ ವೀರಸೇನಾ

  • In State
  • September 24, 2021
  • 514 Views
ಬಾರದ ಲೋಕಕ್ಕೆ ಪ್ರಜಾವಾಹಿನಿ ಕಣ್ಮಣಿ ವೀರಸೇನಾ

ಪ್ರಜಾವಾಹಿನಿ ಕುಟುಂಬದ ಕಣ್ಮಣಿ ಎಂದೇ ಗುರುತಿಸಿಕೊಂಡಿದ್ದ ಪಾವಗಡ ತಾಲೂಕು ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಯುವ ಚೈತನ್ಯ ವೀರಸೇನಾ ಯಾದವ್ ವಿಧಿವಶರಾಗಿದ್ದಾರೆಂದು ಹೇಳಲು ದು:ಖವೆನಿಸುತ್ತದೆ. ಪತ್ರಿಕೆಯ ವರದಿಗಾರನಾಗಿ ಪ್ರತಿ ನಿತ್ಯ ಸುದ್ದಿ ಮೂಲ ಹುಡುಕಿ ತನ್ನ ಕಾಯಕದಲ್ಲಿ ಮಗ್ನರಾಗುತ್ತಿದ್ದ ಯಾದವ ಅವರ ಕಾಳಜಿ ನಿಜಕ್ಕೂ ಪ್ರಶಂಸನೀಯ.
ಪಾವಗಡ ತಾಲೂಕಿನ ಪ್ರತಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ತನ್ನದೆ ಆದ ಕೊಡುಗೆ ಹಾಗೂ ಶ್ರಮ, ಮುತುವರ್ಜಿ ವಹಿಸುತ್ತಿದ್ದ ವೀರಸೇನಾ ಅವರ ಕಾರ್ಯ ತತ್ಪರತೆಗೆ ಪ್ರಜಾವಾಹಿನಿ ಪತ್ರಿಕಾ ಬಳಗದ ಮನಸೂರೆಗೊಂಡಿದ್ದರೆAದು ಹೇಳಲು ಹರ್ಷವೆನಿಸಿದರೂ ಅವರ ಅಕಾಲಿಕ ಮರಣ ಅತ್ಯಂತ ನೋವಿನ ಸಂಗತಿ.
ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿನಲ್ಲಿ ವೀರಸೆನಾ ಅವರನ್ನು ದುರ್ವಿಧಿ ಬಾರದ ಲೊಕಕ್ಕೆ ಕರೆದೊಯ್ದಿರುವುದನ್ನು ಕೇಳಿ ಪತ್ರಿಕಾ ಬಳಗಕ್ಕೆ ಬರಸಿಡಿಲೇ ಬಡಿದಂತಾಯಿತು. ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿಯ ತಿಮ್ಮಮ್ಮನಹಳ್ಳಿಯಲ್ಲಿ ಜನಿಸಿದ ವೀರಸೇನಾ ಕಳೆದ ಹತ್ತು ವರ್ಷಗಳಿಂದ ಪತ್ರಿಕಾ ವರದಿಗಾರರಾಗಿ, ಕೊರೋನಾ ವಾರಿಯರ್ಸ್ ಆಗಿ ಅವರ ಕಾರ್ಯ ನಿರ್ವಹಣೆ ನಿಜಕ್ಕೂ ಶ್ಲಾಘನೀಯ.
ಪಾವಗಡವನ್ನು ಬಹುವಾಗಿ ಕಾಡುತ್ತಿರುವ ಮಟ್ಕಾ ದಂಧೆ ಕೋರರ ವಿರುದ್ಧ ಸಮರ ಸಾರಿ ಸರಣಿ ಲೇಖನ ಬರೆದು ಪೊಲೀಸ್ ಇಲಾಖೆಗೆ ಚುರುಕು ಮುಟ್ಟಿಸಿ ಮಟ್ಕಾ ದೊರೆ ಅಶ್ವತ್ಥ ಹಾಗೂ ಸಹಚರರನ್ನು ಬಂಧಿಸಲು ವೀರಸೇನಾರ ಸರಣಿ ವರದಿಗಳೇ ಕಾರಣವಾಗಿದ್ದವು.
ಶುಕ್ರವಾರ ಮಧ್ಯಾಹ್ನ ವೀರಸೇನಾ ಅವರ ಸ್ವಗ್ರಾಮ ತಿಮ್ಮಮ್ಮನಹಳ್ಳಿಯಲ್ಲಿರುವ ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಅಪಾರಬಂಧು ಬಳಗ ಹಾಗೂ ಪ್ರಜಾವಾಹಿನಿ ಮುಖ್ಯಸ್ಥರಾದ ವಿ ಸುರೇಂದ್ರನ್, ಆದಿನಾರಾಯಣ, ಜಿಲ್ಲಾ ವರದಿಗಾರ ದಿನೇಶ್, ಹಾಗೂ ಕೊರಟಗೆರೆ ವರದಿಗಾರ ವಿಜಯಶಂಕರ್ ಪಾಲ್ಗೊಂಡಿದ್ದರು. ನಂತರ ಪ್ರಜಾವಾಹಿನಿಯ ಕೇಂದ್ರ ಕಚೇರಿಯಲ್ಲಿ ಶ್ರದ್ಧಾಂಜಲಿಯನ್ನು ಆಚರಿಸಲಾಯಿತು. ಸಂಪಾದರು ಎಮ್ ಸ್ವಾಮಿ ಹಾಗೂ ಕಚೇರಿಯ ಸಿಬ್ಬಂಧಿಗಳು ಅಂತಿಮ ನಮನವನ್ನು ಸಲ್ಲಿಸದರು.

Related