ದೇಗಲೂರ ಉಪಚುನಾವಣೆ ಗೆಲುವಿಗೆ ರಣತಂತ್ರ

ದೇಗಲೂರ ಉಪಚುನಾವಣೆ ಗೆಲುವಿಗೆ ರಣತಂತ್ರ

ಔರಾದ್ : ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ದೇಗಲೂರ ವಿಧಾನಸಭಾ ಉಪಚುನಾವಣೆಯ ಪ್ರಯುಕ್ತ ಪಶು ಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಗುರುವಾರ ದೇಗಲೂರಿಗೆ ತೆರಳಿ, ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ರಣತಂತ್ರ ರೂಪಿಸಿದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಕಾರ್ಯಕರ್ತರ ಒತ್ತಾಸೆಯಂತೆ ಮಹಾರಾಷ್ಟ್ರಕ್ಕೆ ಭೇಟಿ ನೀಡಿದರು. ನಾಂದೇಡ ಜಿಲ್ಲೆಯ ಸಂಸದ ಪ್ರತಾಪರಾವ ಪಾಟೀಲ ಚಿಕ್ಲಿಕರ್, ಮುಖೇಡ ಶಾಸಕ ತುಷಾರ ಗೋವಿಂದ ರಾಠೋಡ್, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟರಾವ ಪಾಟೀಲ ಗೋಜೆಗಾಂವಕರ್, ಪಕ್ಷದ ಅಭ್ಯರ್ಥಿ ಸುಭಾಷ ಸಾಬನೆ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಲಹೆ ನೀಡಿದರು.
ತಾಲ್ಲೂಕಿಗೆ ಹತ್ತಿರದಲ್ಲಿರುವ ಮಹಾರಾಷ್ಟ್ರದ ಹಣೆಗಾಂವ್, ಮರಖೇಲ ಮಹಾಶಕ್ತಿ ಕೇಂದ್ರಗಳಲ್ಲಿ ಸಚಿವರ ಪ್ರಭಾವ ಇದೆ. ಈ ಮುಂಚೆ ಉದಗೀರ್, ಮುಖೇಡ್‌ನಲ್ಲಿ ಕೆಲಸ ನಿರ್ವಹಿಸಿದ ಅನುಭವವಿದೆ. ಈ ಭಾಗದ ಜನರ ಸಮಸ್ಯೆಗಳನ್ನು ಅರಿತಿದ್ದಾರೆ. ಹಾಗಾಗಿ ಸಚಿವರನ್ನುಮಹಾರಾಷ್ಟ್ರದ ನಾಯಕರು ಕರೆಸಿದ್ದರಿಂದ ಸಿಂದಗಿ ಚುನಾವಣೆ ಪ್ರಚಾರ ಬಿಟ್ಟು ಮಹಾರಾಷ್ಟ್ರದ ಭೇಟಿ ನೀಡಿದರು.
ಈ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆ. ಮಹಾರಾಷ್ಟ್ರದ ಈಗಿನ ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಈ ಸರ್ಕಾರದ ದುರಾಡಳಿತ, ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆ, ಬಿಜೆಪಿಗೆ ವರದಾನವಾಗಿ ಪರಿಣಮಿಸಲಿವೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಗ್ಗೆ ಜನರಲ್ಲಿ ಸಕಾರಾತ್ಮಕ ಭಾವನೆಯಿದೆ. ಹಾಗೆಯೇ ಅಭಿವೃದ್ಧಿ ಪರ ಚಿಂತನೆಯುಳ್ಳ ಸುಭಾಷ ಸಾಬನೆ ಅವರನ್ನು ಪಕ್ಷವು ಅಭ್ಯರ್ಥಿಯನ್ನಾಗಿ ಮಾಡಿರುವುದರಿಂದ ಬಿಜೆಪಿ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ವಕೀಲ್, ದೋಂಡಿಬಾ ನರೋಟೆ, ಕೇರಬಾ ಪವಾರ, ಸಂಜಿವ ವಡೆಯರ್, ಶಿವಕುಮಾರ ಪಾಂಚಾಳೆ, ಮಹಾದೇವ ತರನಳ್ಳೆ ಸೇರಿದಂತೆ ಇನ್ನಿತರರಿದ್ದರು.

Related