ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷ?

ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷ?

ಲಂಡನ್: ದಾದಾ ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕಳೆದ ವರ್ಷ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಜವಾಬ್ದಾರಿಯಲ್ಲಿ ಇರುವಾಗಲೇ ಅವರನ್ನು ಭವಿಷ್ಯದ ಐಸಿಸಿ ಅಧ್ಯಕ್ಷ ಎಂದು ಹೇಳಲಾಗುತ್ತಿದೆ.

‘ಗ್ಲೋಫ್ಯಾನ್ಸ್’ ಪ್ರಸ್ತುತಪಡಿಸಿದ ಅಭಿಮಾನಿಗಳ ಚಾಟ್ ಶೋ ಕ್ಯೂ 20ಗೂ ಮುನ್ನ ಮಾತನಾಡಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಡೇವಿಡ್ ಗೋವೆರ್, “ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುನ್ನಡೆಸುವ ಒಳ್ಳೆಯ ವ್ಯಕ್ತಿತ್ವ ಮತ್ತು ರಾಜಕೀಯ ಕೌಶಲ್ಯಗಳನ್ನು ಹೊಂದಿದ್ದಾರೆ” ಎಂದು ತಿಳಿಸಿದ್ದಾರೆ.

“ನನ್ನ ಅನುಭದ ಪ್ರಕಾರ ಬಿಸಿಸಿಐ ಅಧ್ಯಕ್ಷ ಸ್ಥಾನದ ಮೇಲೆ ಕುಳಿತು ಆಡಳಿತ ನಡೆಸುವುದು ಸುಲಭದ ವಿಚಾರವಲ್ಲ. ಈ ಜವಾಬ್ದಾರಿ ಹೊರುವವರು ಅನೇಕ ವಿಚಾರಗಳ ಬಗ್ಗೆ ತಿಳಿದುಕೊಂಡಿರಬೇಕು. ಬಿಸಿಸಿಐ ಅಧ್ಯಕ್ಷರಾಗಿರುವುದು ವಿಶ್ವ ಕ್ರಿಕೆಟ್ನ ಅತ್ಯಂತ ಕಷ್ಟದ ಕೆಲಸವಾಗಿದೆ. ಇಂತಹ ಜವಾಬ್ದಾರಿಯೊಂದಿಗೆ ಸೌರವ್ ಗಂಗೂಲಿ ಉತ್ತಮ ಆರಂಭ ಹೊಂದಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಐಸಿಸಿ ಅಧ್ಯಕ್ಷರಾಗುತ್ತಾರೆ” ಎಂದು ಡೇವಿಡ್ ಗೋವೆರ್ ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷರಾಗಿ ನೀವು ಕೈಗೊಳ್ಳುವ ಪ್ರತಿ ತಂತ್ರಕ್ಕೂ ಜವಾಬ್ದಾರಾಗಿರುತ್ತೀರಿ. ಕೋಟ್ಯಂತರ ಭಾರತೀಯರ ಮುಂದೆ ಎಲ್ಲವನ್ನೂ ತೆರೆದಿಡಬೇಕಾಗುತ್ತದೆ. ಹೀಗಿರುವಾಗ ಸೌರವ್ ಗಂಗೂಲಿ ತುಂಬಾ ಒಳ್ಳೆಯ ವ್ಯಕ್ತಿ. ಉತ್ತಮ ಮನೋಭಾವ ಹೊಂದಿದ್ದಾರೆ. ಹಲವು ವಿಚಾರಗಳನ್ನು ಒಗ್ಗೂಡಿಸಿಕೊಂಡು ಕಾರ್ಯನಿರ್ವಹಿಸುತ್ತಾರೆ ಎಂದು ಗೋವೆರ್ ಅಭಿಪ್ರಾಯಪಟ್ಟಿದ್ದಾರೆ.

Related