ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ರಾಣಿ ಚನ್ನಮ್ಮ

ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ರಾಣಿ ಚನ್ನಮ್ಮ

ಶಹಾಪುರ : ಬ್ರಿಟಿಷರ ವಿರುದ್ಧ ಹೋರಾಡಿ ಸದೆಬಡಿದು ಗೆಲುವಿನ ಕಹಳೆ ಮೊಳಗಿಸಿದ ಭಾರತದ ಪ್ರಪ್ರಥಮ ಮಹಿಳೆ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಎಂದು ಸವಿತಾ ಟೋಕಾಪುರ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ “ಆಜಾದಿ ಕಾ ಅಮೃತಮಹೋತ್ಸವ” ಭಾರತ ಸ್ವಾತಂತ್ರ‍್ಯದ 75 ವರ್ಷಗಳ ಸಂಭ್ರಮಾಚರಣೆ ನಿಮಿತ್ಯವಾಗಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, ಸ್ವಚ್ಛ ಭಾರತ್ ಆಂದೋಲನ, ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಕನ್ನಡ ರಾಜ್ಯೋತ್ಸವ ಅಭಿಯಾನ ಅಂಗವಾಗಿ ನಡೆದೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮಳನ್ನು ಯಾವುದೇ ಜಾತಿಗೆ ಸೀಮಿತ ಮಾಡಬೇಡಿ ಏಕೆಂದರೆ ಅಪ್ರತಿಮ ಮಹಿಳಾ ಹೋರಾಟಗಾರ್ತಿಯಾಗಿದ್ದಾಳೆ. ಚನ್ನಮ್ಮಳ ಇತಿಹಾಸ, ಸಮಗ್ರ ಸಾಹಿತ್ಯ ಇಂದಿನ ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಸರ್ಕಾರ ಇನ್ನೂ ಹೆಚ್ಚೆಚ್ಚು ಮಾಡಬೇಕಿದೆ ಎಂದು ಹೇಳಿದರು.
ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ಸುತ್ತಮುತ್ತಲಿನ ಪರಿಸರ ಹಾಗೂ ಸ್ವಚ್ಛತೆ ಕಾಪಾಡಿಕೊಂಡರೆ ಉತ್ತಮ ಆರೋಗ್ಯದಿಂದಿರಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಪ್ರತಿ ಕುಟುಂಬದಲ್ಲೂ ಶೌಚಾಲಯ ನಿರ್ಮಿಸಿಕೊಳ್ಳಿ, ಅಲ್ಲದೆ ಸ್ವಚ್ಛ ಭಾರತ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕೈಯಲ್ಲಿದೆ. ಇದು ಮಹಾತ್ಮ ಗಾಂಧಿ, ಪ್ರಧಾನಮಂತ್ರಿಗಳ ಮಹದಾಸೆಯಾಗಿದೆ. ಇದಕ್ಕೆ ನಾವು ನೀವೆಲ್ಲರೂ ಕೈಜೋಡಿಸಿ ಸ್ವಚ್ಛ ಭಾರತದ ಬಗ್ಗೆ ಮತ್ತಷ್ಟು ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕತೆಯಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ, ನಾಡಿನ ಪ್ರಮುಖ ವ್ಯವಹಾರ ಕೇಂದ್ರಗಳಲ್ಲಿ ಕನ್ನಡ ಬಳಸುವುದು, ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಭಾಷೆಯ ಬಗ್ಗೆ ಮತ್ತಷ್ಟು ಅಭಿಮಾನ ತುಂಬುವ ಹಿತದೃಷ್ಟಿಯಿಂದ ಕನ್ನಡ ಮಹತ್ವ ತಿಳಿಸಿ. ಬೇರೆ ಭಾಷೆಗಳಿಗೆ ಬಗ್ಗದೆ ನಮ್ಮ ಕನ್ನಡ ಭಾಷೆಯ ಕಲಿಕೆಗೆ ಪೂರಕವಾದ ರೀತಿಯನ್ನು ಸಂಪೂರ್ಣವಾದ ವಾತಾವರಣ ನಿರ್ಮಾಣ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ರೇಣುಕಾ ಚಟ್ರಿಕಿ, ಗಣೇಶ್ ಬಡಿಗೇರ್, ದೊಡ್ಡಪ್ಪ ಹುಂಡೆಕಲ್, ಸುರೇಶ್ ಕಂದಾಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ರಮೇಶ್ ಯಾಳಗಿ ಅವರಿಂದ ಜಾನಪದ ಸಂಗೀತ, ಜಯಶ್ರೀ ಹಣಮಂತ ಅವರಿಂದ ಸುಗಮ ಸಂಗೀತ, ರುಕ್ಮಿಣಿ ಎಂ ಸುರ್ವೆ ಅವರಿಂದ ಸಮೂಹ ನೃತ್ಯ, ವರ್ಷಿಕಾ ಚವಾಣ್ ಭರತನಾಟ್ಯ, ಶರಣು ಶಿಂಪಿ, ಪದ್ಮಾವತಿ ಎಂ ನಾಯಕ, ಅವರಿಂದ ಕನ್ನಡ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ಧರಾಮ ಹೊನಕಲ್, ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ದೇವಿಂದ್ರಪ್ಪ ತೋಟಿಗೇರ, ಶರಣಪ್ಪ ಸಾಹು ಹೊಸಕೇರಿ ಇದ್ದರು

Related