ಬೆಂಗಳೂರು: ನಗರದಲ್ಲಿ ಭಾರಿ ಮಳೆಯಿಂದಾಗಿ ಅನಾಹುತಗಳೆ ಸೃಷ್ಟಿಯಾಗುತ್ತಿರುವುದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಹೆಚ್ಚು ಮಳೆಯಾಗಬೇಕು ಎಂದು ಬಯಸುವವನು. ಮಳೆ ಹೆಚ್ಚಾಗಿ ಬಂದಷ್ಟು ನಾವು ಏನೆಲ್ಲಾ ಸರಿಪಡಿಸಿಕೊಳ್ಳಬಹುದು ಎಂದು ತಿಳಿಯುತ್ತದೆ. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಭೆ ಮಾಡಿದ್ದು, ಮುಂಜಾಗ್ರತಾ ಸಭೆಯನ್ನು ಮಾಡಿದ್ದೇವೆ. ಬೆಂಗಳೂರಿನಲ್ಲಿ ಮಳೆನೀರುಗಾಲುವೆಗಳ ಅಭಿವೃದ್ಧಿ ಪೂರ್ಣಗೊಳಿಸಲು 2 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಮಳೆಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಜನರಿಗೆ ಆಕ್ರೋಶವಿದೆ. ಹೀಗಾಗಿ ತಗ್ಗು ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಬೇಸ್ ಮೆಂಟ್ ಪಾರ್ಕಿಂಗ್ ನಿರ್ಮಾಣ ಮಾಡದಿರುವಂತೆ ನಿಯಮ ರೂಪಿಸಲು ನಗರ ಯೋಜನಾ ಪ್ರಾಧಿಕಾರಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಕೆಲವು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ ಭೂಮಿಯಿಂದ ಜಲ ಬರುತ್ತಿದೆ. ಇದನ್ನು ತೆಗೆಯುವಾಗ ಇಬ್ಬರು ಮೃತಪಟ್ಟಿದ್ದಾರೆ. ಇಂತಹ ಅನಾಹುತಗಳನ್ನು ತಪ್ಪಿಸಲು ರಾಜಕಾಲುವೆಗಳ ಎರಡೂ ಬದಿಯ ಬಫರ್ ವಲಯದಲ್ಲಿ ರಸ್ತೆ ಮಾಡಲು ತೀರ್ಮಾನಿಸಿದ್ದೇವೆ. ಇದರಿಂದ 50 ಅಡಿಗಳಷ್ಟು ಜಾಗ ಸುರಕ್ಷಿತವಾಗಿರುತ್ತದೆ. ಜತೆಗೆ ರಾಜಕಾಲುವೆಗಳ ಹೂಳೆತ್ತಲು, ಜನರ ಸಂಚಾರಕ್ಕೂ ಅನುಕೂಲವಾಗಲಿದೆ ಎಂದರು. ಇದನ್ನೂ ಓದಿ: SSIT ಸಂಸ್ಥೆಗಳ ಮೇಲೆ ಇಡಿ ದಾಳಿ ಡಿಸಿಎಂ ಹೇಳಿದ್ದೇನು?
ಬುಧವಾರ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ವೇಳೆ ಅನೇಕರು ನಮ್ಮನ್ನು ಭೇಟಿ ಮಾಡಿದರು, ನಮ್ಮ ಮೇಲೆ ಕೂಗಾಡಿದರು. ನಾನು ಅವರೆಲ್ಲರ ದೂರುಗಳನ್ನು ಆಲಿಸಿದೆ. ಈ ರೀತಿ ಸಮಸ್ಯೆಗೆ ಒಳಗಾದವರು ಕೂಗಾಡುವುದು ಸಹಜ. ನಾವಿರುವುದೇ ಅವರ ಸಮಸ್ಯೆ ಆಲಿಸಲು. ಅವರ ಸಮಸ್ಯೆಗಳನ್ನು ಬಗೆಹರಿಸಲೇ ನಾವಿರುವುದು. ನಾನು ಯಾವಾಗ ಬೇಕಾದರೂ ಅವರನ್ನು ಭೇಟಿ ಮಾಡುತ್ತೇನೆ. ನೂರಾರು ಜನರನ್ನು ಭೇಟಿ ಮಾಡಲಾಗದಿದ್ದರೂ ಅವರ ಪರವಾಗಿ ಬರುವವರನ್ನು ನಾನು ಭೇಟಿ ಮಾಡಿಯೇ ಮಾಡುತ್ತೇನೆ. ಕೆಲವರು ನಮ್ಮ ವಿರುದ್ಧ ಕೂಗಾಡಿದರೆ, ಮತ್ತೆ ಕೆಲವರು ನಮ್ಮ ಕೆಲಸಕ್ಕೆ ಪ್ರಶಂಸೆ ನೀಡುತ್ತಾರೆ. ಬೆಂಗಳೂರು ನಗರದಲ್ಲಿ ಮಳೆಯಿಂದ ಸಮಸ್ಯೆಗೆ ಸಿಲುಕುತ್ತಿದ್ದ ಜಾಗಗಳ ಸಂಖ್ಯೆ 211 ಇತ್ತು. ಈ ಪೈಕಿ 166 ಪ್ರದೇಶಗಳಲ್ಲಿ ಸಮಸ್ಯೆ ಬಗೆಹರಿಸಲಾಗಿದೆ. ಉಳಿದ 44 ಕಡೆ ಕೆಲಸ ಬಾಕಿ ಇದ್ದು, ಇದರಲ್ಲಿ 24 ಕಡೆಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ. ವಿರೋಧ ಪಕ್ಷದವರು ಇರುವುದೇ ರಾಜಕೀಯ ಮಾಡಲು, ಮಾಡಲಿ. ನಾವು ಅವರ ಸಲಹೆಗಳನ್ನು ಸ್ವಾಗತಿಸುತ್ತೇವೆ ಎಂದರು.
