ನಮೋ ವಿದ್ಯಾನಿಧಿ ಸ್ಕಾಲರ್ ಶಿಪ್ ಯೋಜನೆ: ತೇಜಸ್ವೀ ಸೂರ್ಯ

ನಮೋ ವಿದ್ಯಾನಿಧಿ ಸ್ಕಾಲರ್ ಶಿಪ್ ಯೋಜನೆ: ತೇಜಸ್ವೀ ಸೂರ್ಯ

ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರು ತಮ್ಮ ಮಹತ್ವಾಕಾಂಕ್ಷಿ ‘ನಮೋ ವಿದ್ಯಾನಿಧಿ ಸ್ಕಾಲರ್ ಶಿಪ್’ ಯೋಜನೆ ಅಡಿಯಲ್ಲಿ 200 ವಿದ್ಯಾರ್ಥಿಗಳಿಗೆ ಅವರ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 10ಸಾವಿರ ರೂ,ಗಳ ಸ್ಕಾಲರ್ ಶಿಪ್ ವಿತರಿಸಿದ್ದು, 4 ನೆ ಹಂತದಲ್ಲಿ ಜಯನಗರದ ಕಚೇರಿಯಲ್ಲಿ 38 ವಿದ್ಯಾರ್ಥಿಗಳಿಗೆ ನೀಡಿರುತ್ತಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ 10ಸಾವಿರ ವಿದ್ಯಾರ್ಥಿಗಳಿಗೆ 10ಸಾವಿರ ರೂ, ವರೆಗಿನ ಸ್ಕಾಲರ್ ಶಿಪ್ ವಿತರಿಸುವ ಯೋಜನೆಯನ್ನು ಸಂಸದ ಶ್ರೀ ತೇಜಸ್ವೀ ಸೂರ್ಯ ರವರು ಆರಂಭಿಸಿದ್ದು, ಈ ಯೋಜನೆಗೆ ‘ ನಮೋ ವಿದ್ಯಾ ನಿಧಿ ಸ್ಕಾಲರ್ ಶಿಪ್’ ಎಂದು ಹೆಸರಿಡಲಾಗಿದೆ. ಸಂಸದರ ಕಚೇರಿ ವತಿಯಿಂದ ಆರಂಭಿಸಲಾಗಿರುವ ‘ ಬೆಂಗಳೂರು ಸೌತ್ ಎಜುಕೇಶನ್ & ಸೋಷಿಯಲ್ ಟ್ರಾನ್ಸ್ಫಾರ್ಮೇಶನ್’ ಯೋಜನೆ ಅಂಗವಾಗಿ ಈ ಸ್ಕಾಲರ್ ಶಿಪ್ ಆರಂಭಿಸಲಾಗಿದ್ದು, 8,9,10,11& 12 ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

ನಮೋ ವಿದ್ಯಾನಿಧಿ ಸ್ಕಾಲರ್ ಶಿಪ್ ಅನ್ನು ಆರಂಭಗೊಂಡ ಕಳೆದ 6 ತಿಂಗಳಿನಲ್ಲಿ ಇದುವರೆಗೆ 190 ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ಆರ್ಥಿಕವಾಗಿ ಹಿಂದುಳಿದ, ಪೌರ ಕಾರ್ಮಿಕರು, ಏಕ ವ್ಯಕ್ತಿ ಪಾಲಕರನ್ನು ಹೊಂದಿರುವ ಕುಟುಂಬಗಳ ಮಕ್ಕಳಿಗೆ ವಿತರಿಸಲಾಗಿದೆ.

” ನಮೋ ವಿದ್ಯಾನಿಧಿ ಸ್ಕಾಲರ್ ಶಿಪ್ ಇರದಿದ್ದರೆ ನನ್ನ ಇಬ್ಬರೂ ಮಕ್ಕಳು ವಿದ್ಯಾಭ್ಯಾಸದಿಂದಲೇ ವಂಚಿತರಾಗುತ್ತಿದ್ದರು ” ಎಂದು ಕಮಲಾ ನೆಹರೂ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬರ ಪಾಲಕರು ತಿಳಿಸಿದ್ದು ವಿಶೇಷ.

ವಿಜಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬರ ಪಾಲಕರು ಮಾತನಾಡುತ್ತಾ, ” ನನ್ನ ಮಗಳು ಕರಾಟೆ ವಿಭಾಗದಲ್ಲಿ ರಾಷ್ಟ್ರ ಮಟ್ಟದ ಚಾಂಪಿಯನ್ ಆಗಿದ್ದು, ಎಸ್ ಎಸ್ ಎಲ್ ಸಿ ಯಲ್ಲಿ  ಶೇ.91 ರಷ್ಟು ಅಂಕ ಗಳಿಸಿದ್ದಾರೆ. ಈ ಸ್ಕಾಲರ್ ಶಿಪ್ ನಿಂದ ಅವಳ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ” ಎಂದು ತಿಳಿಸಿದರು .

ನಮೋ ವಿದ್ಯಾನಿಧಿ ಸ್ಕಾಲರ್ ಶಿಪ್ ಕುರಿತಾಗಿ ನಂತರ ಮಾತನಾಡಿದ ಸಂಸದ ಶ್ರೀ ತೇಜಸ್ವೀ ಸೂರ್ಯ ರವರು, ” ಸಮರ್ಪಕ ಶೈಕ್ಷಣಿಕ ಅನುಕೂಲತೆ ಸಿಕ್ಕಿದರೆ, ಚಹಾ ಮಾರಿದ ನರೇಂದ್ರ ಮೋದಿ ತರಹದ ವ್ಯಕ್ತಿಯೊಬ್ಬರು ದೇಶದ ಪ್ರಧಾನಿ ಆಗಬಲ್ಲರು, ಬುಡಕಟ್ಟು ಮಹಿಳೆ ಶ್ರೀಮತಿ ದ್ರೌಪದಿ ಮುರ್ಮು ರಂತವರು ರಾಷ್ಟ್ರಪತಿ ಆಗಬಲ್ಲರು, ಪೇಪರ್ ಹಂಚುತ್ತಿದ್ದ ಅಬ್ದುಲ್ ಕಲಾಂ ರಂಥವರು ದೇಶದ ಉನ್ನತ ಸ್ಥಾನಕ್ಕೆ ಏರಬಹುದು ಎಂಬುದು ಸಾಬೀತಾಗಿದೆ . ಇಂದಿನ ವಿದ್ಯಾರ್ಥಿಗಳೇ ಮುಂದೊಂದು ದಿನ ಭವ್ಯ ಭಾರತದ ನಿರ್ಮಾತೃಗಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ” ಎಂದು ತಿಳಿಸಿದರು.

‘ನಮೋ ವಿದ್ಯಾನಿಧಿ ಸ್ಕಾಲರ್ ಶಿಪ್ ‘ ಇದೊಂದು ನಾಗರಿಕರ ಸಾಮಾಜಿಕ ಬದಲಾವಣೆಯ ಅಭಿಯಾನವಾಗಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ಸಹಾಯವಾಗುವ ನಿಟ್ಟಿನಲ್ಲಿ, ನಗರದ ಅನೇಕ ದಾನಿಗಳು ಮುಂದೆ ಬಂದಿದ್ದು ಇದೊಂದು ಸಾಮಾಜಿಕ ಬದಲಾವಣೆಯ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಈ ಸಂದರ್ಭದಲ್ಲಿ ಶ್ರೀ ಸುನಿಲ್ ( ಉಪಾಧ್ಯಕ್ಷರು, ಸಿ. ಇ. ಓ, ರಕುಟೆನ್ ಇಂಡಿಯಾ) ಶ್ರೀ ಪವನ್ ಆರ್ ಸಿ ( ಆಚೀವ್ ಸ್ಕೂಲ್ ಆಫ್ ಎಜುಕೇಶನ್ ) ರವರು ಕೂಡ ಸ್ಕಾಲರ್ ಶಿಪ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು.

 

 

Related