ಮದ್ಯದಂಗಡಿ ಸ್ಥಳಾಂತರ- ಮಹಿಳೆಯರ ಹೋರಾಟಕ್ಕೆ ಜಯ

  • In State
  • August 21, 2021
  • 452 Views
ಮದ್ಯದಂಗಡಿ ಸ್ಥಳಾಂತರ- ಮಹಿಳೆಯರ ಹೋರಾಟಕ್ಕೆ ಜಯ

ಚಿಕ್ಕಮಗಳೂರು : ಕಡೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಮಹಿಳೆಯರು ನಿರಂತರ ಹೋರಾಟ ನಡೆಸುತ್ತಿದ್ದು, ಈ ಹಿನ್ನೆಲೆ ಅಬಕಾರಿ ಜಿಲ್ಲಾ ನ್ಯಾಯಾಲಯ ಶನಿವಾರ ಮದ್ಯದಂಗಡಿಯನ್ನು ಅರವತ್ತು ದಿವಸದ ಒಳಗೆ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಆದೇಶಿಸಿದೆ.
ಗ್ರಾಮಸ್ಥರ ವಿರೋಧದ ನಡುವೆಯೇ ಏಕಾಏಕಿ ಊರಿನಲ್ಲಿ ಮದ್ಯದಂಗಡಿ ತೆರೆಯಲು ಕೆಲವರು ಮುಂದಾಗಿದ್ದಾರೆ. ಇದು ಮಹಿಳೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಜನರು ಜೀವನೋಪಾಯಕ್ಕೆ ಕೂಲಿಯಿಂದ ಬರುವ ಅಲ್ಪ ಆದಾಯವನ್ನೇ ನಂಬಿದ್ದಾರೆ. ಮದ್ಯದಂಗಡಿಯಿಂದ ಬಡ ಜನರ ಜೀವನ ಬೀದಿಗೆ ಬೀಳಲಿದೆ ಎಂಬ ಆತಂಕದಿಂದ ಮಹಿಳೆಯರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದರು.

ಮದ್ಯದಂಗಡಿ ತೆರವಿಗೆ ಗ್ರಾ. ಪಂ. ಸದಸ್ಯರಾದ ಸವಿತಾ ಪ್ರಸನ್ನ, ಸ್ಥಳೀಯ ಹೋರಾಟಗಾರ ಮಂಜುನಾಥ್ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದರು. ದೂರು ಆಲಿಸಿದ ಅಬಕಾರಿ ಜಿಲ್ಲಾ ನ್ಯಾಯಾಲಯ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮದ್ಯದಂಗಡಿಯನ್ನು ಸ್ಥಳಾಂತರಿಸುವಂತೆ ಖಡಕ್ ಸೂಚನೆ ಕೊಟ್ಟಿದೆ.

ಕಾನೂನು ನ್ಯಾಯದ ಪರ ಇದೆ ಎಂಬುದಕ್ಕೆ ಈ ತೀರ್ಪೇ ಸಾಕ್ಷಿ, ಅನ್ಯಾಯದ ವಿರುದ್ಧ ಕಾನೂನು ಕ್ರಮದ ಮೂಲಕ ಹೋರಾಡಿ ಜಯ ಗಳಿಸಬಹುದು ಎಂಬುದಕ್ಕೆ ಇದು ಉದಾಹರಣೆ ಎಂದು ಹೋರಾಟಗಾರ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related