ಬೇಡಿಕೆಗಳ ಈಡೇರಿಕೆಗೆ ಒತ್ತಾಯ

  • In State
  • September 22, 2021
  • 583 Views
ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಹಾನಗಲ್-ಕೋವಿಡ್ ಮಹಾಮಾರಿಯಿಂದ ಆನ್‌ಲೈನ್ ತರಗತಿಯಿಂದ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಅಂತಹ ಮಕ್ಕಳಿಗೆ ಪ್ರತ್ಯೇಕ ಶಿಕ್ಷಣ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ತಾಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಮಂಗಳವಾರ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಪ್ರಗತಿಪರ ಸಂಘಗಳ ಸದಸ್ಯರು ಮನವಿಯಲ್ಲಿ, ಪ್ರಸಕ್ತ ಪರಿಸ್ಥಿತಿಯಲ್ಲಿ ಕೋವಿಡ್-19 ನಮಗೆ ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಅದರಲ್ಲೂ ಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡಿದೆ. ಪ್ರಗತಿಪರ ಸಂಘಟನೆಗಳು ತಾಲೂಕಿನ 2 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 14 ಶಾಲೆಗಳನ್ನು ಸಮೀಕ್ಷೆ ಮಾಡಿದೆ. ಈ ಸರ್ವೆಯಲ್ಲಿ ಒಟ್ಟು 1301 ವಿದ್ಯಾರ್ಥಿಗಳಲ್ಲಿ 249 ವಿದ್ಯಾರ್ಥಿಗಳಿಗೆ ಸ್ಮಾರ್ಟಫೋನ್ ಇಲ್ಲ, 150 ವಿದ್ಯಾರ್ಥಿಗಳ ಮನೆಯಲ್ಲಿ ಟಿವಿ ಇಲ್ಲ ಎಂದು ತಿಳಿದು ಬಂದಿದೆ. ಆದರೆ ಶಾಲೆಗಳಲ್ಲಿ ಫೋಟಿನ್ ಇಲ್ಲದವರಿಗೆ ಅವರ ಪಕ್ಕದ ಮನೆಯವರ ಮೊಬೈಲ್ ಲಿಂಕ್ ಮಾಡಿರುವುದಾಗಿ ದಾಖಲಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಯಕ್ಷ ಪ್ರಶ್ನೆ. ಇಂತಹ ಸಂದರ್ಭದಲ್ಲಿ ಸಮರ್ಪಕ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ.

ಮಕ್ಕಳಿಗೆ ಬೇಕಾದ ಉಚಿತ ಪಠ್ಯ ಪುಸ್ತಕಗಳನ್ನು ನೀಡದೆ ಇರುವುದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ. ಹೀಗಾಗಿ ಒಂದು ವಾರದೊಳಗೆ ತಾಲೂಕಿನ ಎಲ್ಲ ಶಾಲೆಗಳಿಗೂ ಅಗತ್ಯ ಪುಸ್ತಕ ವಿತರಣೆಯಾಗಬೇಕು. ಸ್ಮಾರ್ಟ್ ಫೋನ್ ಇಲ್ಲದೆ 6 ತಿಂಗಳಿಂದ ಆನ್‌ಲೈನ್ ಶಿಕ್ಷಣದಿಂದ ವಂಚಿತವಾಗಿರುವ ಮಕ್ಕಳಿಗೆ ಪ್ರತ್ಯೇಕ ಶಿಕ್ಷಣ ಒದಗಿಸಬೇಕು. ಶಿಕ್ಷಣ ಒದಗಿಸುವ ಶಿಕ್ಷಕರ ಆರೋಗ್ಯ ಹಿತದೃಷ್ಟಿ ಕಾಪಾಡಿ ಕಡ್ಡಾಯ ಶಿಕ್ಷಣ ನೀಡಲು ಸೂಚಿಸಬೇಕು. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತುರ್ತು ಲಸಿಕೆ ವಿತರಿಸಬೇಕು ಎಂದು ಮನವಿ ಮಾಡಿದ್ದಾರೆ.
ರೋಶನಿ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ, ಯಂಗ್ ವಿಜನ್ ಅಧ್ಯಕ್ಷ ಫೈರೋಜಅಹ್ಮದ ಶಿರಬಡಗಿ, ತ್ಯಾಗರಾಜ ಓಲೇಕಾರ, ಅಲ್ ಹಸನತ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಮೈನುದ್ದೀನ ಸಿರ್ಸಿ, ಗುತ್ತಿಗೆದಾರ ರಾಮಪ್ಪ ಕರೆಕ್ಯಾತನಹಳ್ಳಿ, ನ್ಯಾಯವಾದಿ ಮಹೇಶ ಕರೆಕ್ಯಾತನಹಳ್ಳಿ ಮೊದಲಾದವರು ಮನವಿ ಸಲ್ಲಿಸಿಸುವ ಸಂದರ್ಭದಲ್ಲಿ ಇದ್ದರು.

Related