ಭಾರತ ಬ್ಯಾಡ್ಮಿಂಟನ್ ತಂಡ ಪ್ರಕಟ

ಭಾರತ ಬ್ಯಾಡ್ಮಿಂಟನ್ ತಂಡ ಪ್ರಕಟ

ನವದೆಹಲಿ :  ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಸೇರಿದಂತೆ ಬ್ಯಾಂಕಾಕ್‌ನಲ್ಲಿ ಜನವರಿಯಲ್ಲಿ ನಡೆಯಲಿರುವ ಪ್ರಮುಖ ಬ್ಯಾಡ್ಮಿಂಟನ್ ಟೂರ್ನಿಗಳಿಗೆ ಪೂರ್ಣಪ್ರಮಾಣದ ತಂಡವನ್ನು ಕಳುಹಿಸಲು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ನಿರ್ಧರಿಸಿದೆ. ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಬಿ.ಸಾಯ್ ಪ್ರಣೀತ್, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಅವರು ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕೋವಿಡ್-19ರ ಕಾಟ ಆರಂಭವಾದಾಗಿನಿಂದ  ಶ್ರೀಕಾಂತ್ ಹೊರತುಪಡಿಸಿ ಭಾರತದ ಬ್ಯಾಡ್ಮಿಂಟನ್ ಪಟುಗಳು ಯಾವುದೇ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಂಡಿಲ್ಲ. ಅಕ್ಟೋಬರ್‌ನಲ್ಲಿ ನಡೆದಿದ್ದ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಶ್ರೀಕಾಂತ್ ಸ್ಪರ್ಧಿಸಿದ್ದರು.

ಜನವರಿ 12ರಿಂದ 17ರ ವರೆಗೆ ನಡೆಯಲಿರುವ ಥಾಯ್ಲೆಂಡ್ ಓಪನ್‌ನಲ್ಲಿ ಭಾರತದ ಕ್ರೀಡಾಪಟುಗಳು ಈ ಋತುವಿನಲ್ಲಿ ಮೊದಲ ಬಾರಿ ಕಣಕ್ಕೆ ಇಳಿಯಲಿದ್ದಾರೆ. ಥಾಯ್ಲೆಂಡ್ ಓಪನ್‌ನ ಮತ್ತೊಂದು ಆವೃತ್ತಿ ಜನವರಿ 19ರಿಂದ 24ರ ವರೆಗೆ ನಡೆಯಲಿದ್ದು 27ರಿಂದ 31ರ ವರೆಗೆ ವಿಶ್ವ ಟೂರ್ ಫೈನಲ್ಸ್ ನಡೆಯಲಿದ್ದು ಅದರಲ್ಲೂ ಈ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

Related