ಬೆಂಗಳೂರು: ಪತ್ರಕರ್ತನಾಗಿ ಸಮಾಜವನ್ನು ಬಿಡಿ-ಬಿಡಿಯಾಗಿ ನೋಡುತ್ತಿದ್ದ ನಾನು ಸಮಾಜವಾದದ ಆಲದ ಮರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗರಡಿಯಲ್ಲಿ ಇಡಿ ಇಡಿಯಾಗಿ ಗ್ರಹಿಸುವುದನ್ನು ಕಲಿತೆ. ಹೀಗಾಗಿ ಇಲ್ಲಿ ನನಗೆ ಸಲ್ಲುವ ಎಲ್ಲಾ ಸನ್ಮಾನ, ಗೌರವಗಳನ್ನು ನಾನು ಆಲದ ಮರಕ್ಕೇ ಅರ್ಪಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಪ್ರಭಾಭಿನಂದನಂ” ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿಂದುಳಿದ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಬದುಕಿನ ಆಯ್ಕೆಗಳೇ ಇರಲಿಲ್ಲ. ಹೀಗಾಗಿ ನನ್ನ ಪಾಲಿಗೆ ಒದಗಿ ಬಂದಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾ, ಬಂದದ್ದೆಲ್ಲವನ್ನೂ ಬಂದ ಹಾಗೆಯೇ ಸ್ವೀಕರಿಸುತ್ತಾ ಮುಂದೆ ಸಾಗಿ ಈಗ ನಿಮ್ಮ ಮುಂದೆ ಧನ್ಯತೆಯಿಂದ ನಿಂತಿದ್ದೇನೆ. ನಾನು ಸಾಗಿಬಂದ ಹಾದಿಯನ್ನು ಹಿಂದಿರುಗಿ ನೋಡಿದಾಗ ವೃತ್ತಿಪರತೆ ಮತ್ತು ಕರ್ತವ್ಯ ಪ್ರಜ್ಞೆ ಇಲ್ಲಿಯವರೆಗೂ ನನ್ನನ್ನು ಬೆರಳಿಡಿದು ನಡೆಸಿದೆ ಎಂದು ಭಾವಿಸುತ್ತೇನೆ.
ನಾನು ಕನ್ನಡ ಪ್ರಭ ಬಿಟ್ಟು 2013 ರಲ್ಲಿ ಮುಖ್ಯಮಂತ್ರಿಗಳ ನೆರಳಿಗೆ ಬಂದೆ. ಪತ್ರಿಕಾ ವೃತ್ತಿಯ ಸಾಧ್ಯತೆಗಳನ್ನೆಲ್ಲಾ ಇಲ್ಲಿ ಪ್ರಯೋಗಿಸತ್ತಾ ಹೋದೆ. ಆದರೆ, ಪತ್ರಿಕಾ ಕಚೇರಿಯಲ್ಲಿ ಇದ್ದ ಸಮಯದ ಮಿತಿ ಇಲ್ಲದೆ ಇಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇತ್ತು. ಈ ಸಂದರ್ಭದಲ್ಲಿ ಇಡೀ ರಾಜ್ಯದ ಪತ್ರಕರ್ತ ಸಮುದಾಯ ನನ್ನ ಸಹಕಾರ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು. ಇದನ್ನೂ ಓದಿ: ಧರ್ಮಸ್ಥಳ ಶ್ರೀ ಕ್ಷೇತ್ರಕ್ಕೆ ಭವ್ಯ “ಧರ್ಮಯಾತ್ರೆ”
ನಾನು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಆಗಿದ್ದ ಸಂದರ್ಭದಲ್ಲಿ, ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರು ಕೆಲಸ ಕಲಿಯಲು ಕೊಟ್ಟ ಅವಕಾಶ, ನೀಡಿದ ಪ್ರೋತ್ಸಾಹ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಈ ಆತ್ಮವಿಶ್ವಾಸ ಒಂದು ಸಂಗತಿಯನ್ನು ಹಲವು ಕೋನಗಳಿಂದ ಅರ್ಥ ಮಾಡಿಕೊಳ್ಳುವುದನ್ನು ಕಲಿಸಿತು. ಬಿಡುವಿಲ್ಲದ ಪ್ರಯಾಣ, ನಿದ್ದೆ ಇಲ್ಲದ ರಾತ್ರಿಗಳು, ಮನೆ-ಮಕ್ಕಳಿಗೆ ಸಮಯ ಕೊಡಲು ಸಾಧ್ಯವಿಲ್ಲದಾದಾಗ, ರಾಜಕಾರಣ/ಒಳ ರಾಜಕಾರಣ ಕೆಲವೊಮ್ಮೆ ನನ್ನ ಆತ್ಮವಿಶ್ವಾಸವನ್ನು ಅಲ್ಲಾಡಿಸಿ ಪತ್ರಿಕೆ ಕೆಲಸ ಬಿಟ್ಟು ತಪ್ಪು ಮಾಡಿದ್ನಾ ಅಂತಲೂ ಅನ್ನಿಸಿದ್ದಿದೆ. ಇಂಥಾ ಘಳಿಗೆಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳೇ ದಿನಕ್ಕೆ 16-18 ಗಂಟೆ ಕೆಲಸ ಮಾಡುವಾಗ ಅದರ ಮುಂದೆ ನನ್ನದೇನು ಎಂದುಕೊಂಡು ಮತ್ತೆ ಚಾರ್ಜ್ ಆಗುತ್ತಿದ್ದೆ ಎನ್ನುವುದನ್ನು ಕೆವಿಪಿ ನೆನಪು ಮಾಡಿಕೊಂಡೆ ಎಂದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಬಳಿಕ ಶಿವಾನಂದ ತಗಡೂರು ಅವರು ಪತ್ರಕರ್ತ ಸಮುದಾಯದ ರಾಶಿ ರಾಶಿ ಸಮಸ್ಯೆಗಳನ್ನು ಪ್ರತೀ ದಿನ ನನ್ನ ಬಳಿಗೆ ತರುತ್ತಿದ್ದರು. ಸರ್ಕಾರದಿಂದ, ಇಲಾಖೆಯಿಂದ ಆಗಬೇಕಾದ ಮತ್ತು ಬಾಕಿ ಇರುವ ಕೆಲಸಗಳ ಬಗ್ಗೆ ಕ್ರಿಯಾಶೀಲ ಒತ್ತಡ ಹೇರುತ್ತಿದ್ದರು. ಅದನ್ನೆಲ್ಲಾ ನಾನು ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಮತ್ತು ಕಾರ್ಯದರ್ಶಿಗಳಾದ ಕಾವೇರಿ ಮೇಡಂ ಅವರ ಮುಂದಿಡುತ್ತಿದ್ದೆ. ಇವರಿಬ್ಬರೂ ಅತ್ಯಂತ ಸಹೃದಯತೆಯಿಂದ ಸಹಕಾರ ನೀಡಿದರು. ಆಡಳಿತಾತ್ಮಕ ಮತ್ತು ತಾಂತ್ರಿಕ ಅಡೆತಡೆಗಳನ್ನು ನನ್ನೊಂದಿಗೆ ಚರ್ಚಿಸಿ ಸಕಾರಾತ್ಮಕ ಪರಿಹಾರ ಕಂಡುಕೊಳ್ಳಲು ಒಂದು ತಂಡವಾಗಿ ಕೆಲಸ ಮಾಡಿದೆವು. ಇದರ ಒಟ್ಟು ರಿಣಾಮದಲ್ಲಿ ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್, ಆರೋಗ್ಯ ಸಂಜೀವಿನಿ, ಮಾಸಾಶನದ ಹೆಚ್ಚಳ ಸೇರಿ ಹಲವು ಅನುಕೂಲಗಳು ಪತ್ರಕರ್ತ ಸಮುದಾಯದ ಅಂಗೈ ತಲುಪುವಂತಾಯಿತು. ಹೀಗಾಗಿ ಇವತ್ತಿನ ಈ ಸನ್ಮಾನ ಮತ್ತು ಗೌರವದಲ್ಲಿ ಅವರದ್ದೂ ದೊಡ್ಡ ಪಾಲು ಇದೆ ಧನ್ಯತೆ ಅರ್ಪಿಸಿದರು.
