ಶಹಾಪುರ: ಕಲ್ಯಾಣ ಕರ್ನಾಟಕ ಭಾಗದ ಗುತ್ತಿಗೆದಾರ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದ್ದು, ಜೆಜೆಎಂ ಯೋಜನೆ ಯಡಿಯಲ್ಲಿ ಮಾಡಿದ ಕೆಲಸಕ್ಕೆ ಅನುದಾನ ಇಲ್ಲದೇ ನಿತ್ಯ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು ಗುತ್ತಿಗೆದಾರರ ಬದುಕನ್ನು ಸರ್ವನಾಶ ಮಾಡಲು ಹೊರಟಿರುವ ಸರ್ಕಾರ ಕೂಡಲೇ ಅನುದಾನ ಒದಗಿಸಿಕೊಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘದ ತಾಲೂಕ ಅಧ್ಯಕ್ಷ ವಿಶ್ವನಾಥರೆಡ್ಡಿ ಹಳಿಸಗರ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾಡಿದ ಜೆಜೆಎಂ(ಜಲ ಜೀವನ ಮೀಷನ್) ಯೋಜನೆಯಡಿಯಲ್ಲಿ ಮಾಡಿದ ಕಾಮಗಾರಿಗೆ ಪೂರ್ಣ ಅನುದಾನ ಇಲ್ಲದೇ ಗುತ್ತಿಗೆದಾರರ ಬದುಕು ಬೀದಿಗೆ ಬಿದ್ದಿದೆ. ಕಳೆದ ಒಂದುವರೆ ವರ್ಷದಿಂದ ಬಾಕಿ ಬಿಲ್ ಪಾವತಿ ಮಾಡಿಲ್ಲ. ಇದನ್ನೂ ಓದಿ: ಫೆ. 25ರಂದು ಕೇಂದ್ರ ಜಲಶಕ್ತಿ ಸಚಿವರ ಭೇಟಿ: ಡಿಸಿಎಂ
ಕ.ಕರ್ನಾಟಕ ಭಾಗದ ಗುತ್ತಿಗೆದಾರರು ಬೇಸತ್ತು ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಗುತ್ತಿಗೆದಾರರ ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ. ಹೀಗಾಗಿ ನಮಗೆ ದಯಾಮರಣ ನೀಡಿ. ಒಂದೂವರೆ ವರ್ಷ ಕಳೆದರೂ ನಮ್ಮ ಹಣ ಬಾಕಿ ಉಳಿಸಿಕೊಂಡು, ಪ್ರತಿದಿನ ಒಂದಲ್ಲಾ ಒಂದು ಕಾರಣ ಹೇಳುತ್ತಾ ನಾಳೆ, ನಾಡಿದ್ದು ನಿಮ್ಮ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾ ಬದುಕನ್ನೇ ಸರ್ವನಾಶ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕಡೆ ಕೆಲಸವೂ ಇಲ್ಲದೇ ನಾವು ಸಾಲ ಮಾಡಿ ಕೆಲಸಕ್ಕೆ ಹಾಕಿರುವ ನಮ್ಮ ಹಣ ನಮಗೆ ಕೊಡದೆ ನಮ್ಮೆಲ್ಲರ ಬದುಕನ್ನೇ ಕಿತ್ತುಕೊಂಡು ಸರ್ಕಾರ ಗುತ್ತಿಗೆದಾರರಿಗೆ ನರಕ ತೋರಿಸುತ್ತಿದೆ. ಸಾಲಗಾರರ ಕಿರುಕುಳ ಹೆಚ್ಚಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ದಾರಿಯಾಗಿದೆ. ಇದೀಗ ತಾಳ್ಮೆ ಮೀರಿ ಹೋಗಿದೆ. ಗುತ್ತಿಗೆದಾರರ ಪಾಲಿಗೆ ಉಳಿದಿರುವು ಸಾಯುವ ಮಾರ್ಗ ಒಂದೇ ಆದ್ದರಿಂದ ಮುಂದಾಗುವ ಗುತ್ತಿಗೆದಾರರ ಮಾರಣಹೋಮಕ್ಕೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.
ಕಾಮಗಾರಿ ಪ್ರಗತಿಯಲ್ಲಿರುವ ವೇಳೆ ಅನೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತವೆ. ಆದರೆ ಸರ್ಕಾರದಿಂದಲೇ ಸಿ-ಪೇಟ್ ರಿಪೋರ್ಟ್ನಲ್ಲಿರುವ ಸಾಮಾಗ್ರಿಗಳನ್ನೆ ಬಳಸಿ ಕಾಮಗಾರಿಯನ್ನು ಮಾಡುತ್ತೇವೆ. ಇದರಲ್ಲಿ ಕಳಪೆಯಾಗಲು ಸಾಧ್ಯವಿಲ್ಲ ಮತ್ತು ಅಧಿಕಾರಿಗಳು ಸಹ ಕಾಲ ಕಾಲಕ್ಕೆ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕವೇ ಕಾಮಗಾರಿ ಮುಗಿಯುತ್ತದೆ. ಸುಖಸುಮ್ಮನೆ ಆರೋಪ ಮಾಡಿ ಗುತ್ತಿಗೆದಾರರ ನೆಮ್ಮದಿಯನ್ನೇ ಹಾಳು ಮಾಡುತ್ತಿದ್ದಾರೆ. ಒಂದೆಡೆ ಅನುದಾನ ಇಲ್ಲಾ, ಇನ್ನೊಂದೆಡೆ ಮೆಲಿಂದ ಮೇಲೆ ಹೊಡೆತ ಬಿದ್ದರೆ ಗುತ್ತಿಗೆದಾರರು ಹೇಗೆ ಜೀವನ ಸಾಗಿಸಬೇಕು ಎಂದು ಗುತ್ತಿಗೆದಾರರು ಮರೆಪ್ಪ ಪ್ಯಾಟಿ ಹೇಳಿದರು.
ನಿರ್ವಹಣೆಯ ಕೊರತೆಯಿಂದ ಕೈಗೊಂಡ ಕಾಮಗಾರಿಯ ನಲ್ಲಿ, ಪೈಪ್ಗಳು ಹೊಡೆದುಹಾಕುತ್ತಾರೆ, ಮತ್ತು ನಲ್ಲಿಗಳಿಗೆ ಕುರಿಗಳನ್ನು ಕಟ್ಟುತ್ತಾರೆ, ಅದಕ್ಕೂ ಸಹ ಅಧಿಕಾರಿಗಳು ಗುತ್ತಿಗೆದಾರರನ್ನೆ ಹೊಣೆ ಮಾಡುತ್ತಾರೆ ಅನಿವಾರ್ಯವಾಗಿ ಗುತ್ತಿಗೆದಾರರೆ ಹೇಗಾದರೂ ಮಾಡಿ ಪೂರ್ಣಗೊಳಿಸಬೇಕಿದೆ. ಮತ್ತು ಕಾಮಗಾರಿ ಮುಗಿದ ನಂತರ ಆಧಾರ್ ಕಾರ್ಡ್ ಮತ್ತು ಪಂಚಾಯಿತಿಗಳನ್ನು ಹರ ಘರ್ ಜಲ್ ಪಡೆಯಲು ಸಾಕಷ್ಟು ಹರಸಾಹಸ ಪಡಬೇಕು, ಜನರಿಂದ ಇಲ್ಲಸಲ್ಲದ ಮಾತುಗಳನ್ನು ಕೇಳಬೇಕು ಇಲ್ಲವಾದರೆ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಕಾಮಗಾರಿ ನಿಲ್ಲಿಸುತ್ತಾರೆ. ಆದ್ದರಿಂದ ಸರ್ಕಾರ ಗುತ್ತಿಗೆದಾರರ ಸಮಸ್ಯೆ ಆಲಿಸಿ ಅನುದಾನ ಬಿಡುಗೊಡೆಗೊಳಿಸಿ ಎಂದರು.
ಈ ಸಂದರ್ಭದಲ್ಲಿ ಹಣಮಂತರೆಡ್ಡಿ ಮೇಟಿ, ರಾಜಶೇಖರ ಪಾಟೀಲ್ ಉಕ್ಕಿನಾಳ, ಮಲ್ಲಿಕಾರ್ಜುನಗೌಡ ಗುಂಡಗುರ್ತಿ, ಬಸವರಾಜಪ್ಪಗೌಡ, ಯಲ್ಲಪ್ಪ ನರಿ, ಭೀಮರಾಯ ಸೈದಾಪುರ, ಸಿದ್ದಣ್ಣ ತಣಕೇದಾರ, ಬಸವರಾಜ ನಾಟೇಕರ, ದೇವೆಗೌಡ ದಿಗ್ಗಿ, ಆನಂದ ಹುಡೇದ, ಎಮ್,ಟಿ ನಾಯ್ಕೋಡಿ, ಬೈಲಪ್ಪ ಶಿರವಾಳ, ಅಶೋಕ ಅಂಗಡಿ, ನಾಗು ಬೇಗಾರ, ಅಮರೇಶ ಸಜ್ಜನ್, ಶಹರುಕ್ ಪಟೇಲ್, ಮಲ್ಲಣಗೌಡ ಪೊ,ಪಾಟೀಲ, ಬಸವರಾಜಪ್ಪಗೌಡ ಪೊ,ಪಾಟೀಲ, ವೀರಣ್ಣ ಅಂಗಡಿ, ಚಾಂದಪಾಶ, ರಂಗನಾಥ ದಳಪತಿ, ಲಕ್ಷ್ಮಣ ರಾಠೋಡ, ಶರಾಗೌಡ, ನಹೀಸಾಬ್, ಅಶೊಕರೆಡ್ಡಿ, ಚೆನ್ನಪ್ಪ, ಲಕ್ಷ್ಮಣ ಜಾದರ ಸೇರಿದಂತೆ ಇತರರು ಇದ್ದರು.
