ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ 90.56 ಲಕ್ಷರೂ ವೆಚ್ಚದಲ್ಲಿ ನೂತನ ಕಸ ವಿಲೇವಾರಿ ಘಟಕದ ನಿರ್ಮಾಣ ಕಾಮಗಾರಿ ಕೆಲಸಕ್ಕೆ ಕ್ಷೇತ್ರದ ಶಾಸಕ ಎಚ್ಎಂ ಗಣೇಶ್ ಪ್ರಸಾದ್ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮ ಸ್ವಚ್ಛತೆ ಪರಿಸರ ನೈರ್ಮಲ್ಯ ತಡೆಗಟ್ಟಲು ಎಫ್ ಎಸ್ ಟಿ ಯೋಜನೆಯಲ್ಲಿ ಸುಮಾರು 90.56 ಲಕ್ಷ ರು ವೆಚ್ಚದಲ್ಲಿ ಗ್ರಾಮದ ಕಸ ವಿಲೇವಾರಿ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕಸ ವಿಲೇವಾರಿ ಘಟಕಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಸ್ವಚ್ಛತೆ ಗ್ರಾಮಗಳಿಂದ ಪ್ರಾರಂಭಗೊಂಡರೆ ಸುತ್ತಮುತ್ತಲಿನ ಪರಿಸರ ವಾತಾವರಣವು ಶುದ್ದಿ ಆಗುವ ಮೂಲಕ ಉತ್ತಮ ಮಾಲಿನ್ಯ ವ್ಯವಸ್ಥೆ ಆಗಲಿದ್ದು ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಜೊತೆ ಸ್ವಚ್ಛತೆಗೂ ಪ್ರಾಮುಖ್ಯತೆ ನೀಡಲಾಗುವುದು ಎಂದರು. ಹಾಗೂ ಕಾಮಗಾರಿ ಗುಣಮಟ್ಟದಿಂದ ಇರಲಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಕಾಡ ಅಧ್ಯಕ್ಷ ಎಚ್ ಎಸ್ ನಂಜಪ್ಪ, ತೆರಕಣಾಂಬಿ ಪಿ.ಮಹದೇವಪ್ಪ ಸೇರಿದಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರುಗಳು, ಇಲಾಖೆಯ ಅಧಿಕಾರಿಗಳು,ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು, ಇತರರು ಹಾಜರಿದ್ದರು.
