ದಲಿತರು ಶಿಕ್ಷಣವಂತರಾಗಿ, ಜಾಗೃತಿ ಮೂಡಿಸಿ : ಶಿವಾನಂದ

ದಲಿತರು ಶಿಕ್ಷಣವಂತರಾಗಿ, ಜಾಗೃತಿ ಮೂಡಿಸಿ : ಶಿವಾನಂದ

ಇಂಡಿ : ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಸರ್ಕಾರಿ ಇಲಾಖೆಗಳಲ್ಲಿನ ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿಕೊಂಡು, ಅವರ ಘನತೆಗೆ ಮಸಿ ಬಳಿಯುವ ಕೆಲಸ ಮಾಡುವುದು ಬಿಟ್ಟು, ಸ್ವಾಭಿಮಾನದಿಂದ ಬದುಕು ಸಾಗಿಸಬೇಕು. ಬಡ ದಲಿತ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಯಲು ದಲಿತ ಮುಖಂಡರು ಅನುಕೂಲ ಕಲ್ಪಿಸಿಕೊಡಬೇಕು ಎಂದು ದಲಿತ ಯುವ ಮುಖಂಡ ಶಿವಾನಂದ ಮೂರಮನ ಹೇಳಿದರು.

ಭಾನುವಾರ ಪಟ್ಟಣದ ಶಹರ ಪೊಲೀಸ್ ಠಾಣೆ ಆವರಣದಲ್ಲಿ ಕರೆದ ದಲಿತ ಮುಖಂಡರ ಸಭೆಯಲ್ಲಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ದಲಿತರಿಗೆ ಸ್ವಾಭಿಮಾನದ ಬದುಕು ಸಾಗಿಸಲು ಕರೆ ನೀಡಿದ್ದಾರೆ. ಮೊದಲು ದಲಿತರು ಶಿಕ್ಷಣವಂತರಾಗಬೇಕು. ದಲಿತ ಮುಖಂಡರು ದಲಿತ ಕೇರಿಗಳಿಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಮಾವೇಶ, ಕಾರ್ಯಕ್ರಮ ಎಂದು ಹೇಳಿಕೊಂಡು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬಾರದು ಎಂದು ಕಿವಿ ಮಾತು ಹೇಳಿದರು.

ದಲಿತ ಯುವ ಮುಖಂಡ ಶಿವಾನಂದ ಮೂರಮನ್ ಮಾತನಾಡಿ, ಅಂಬೇಡ್ಕರವರ ಹೆಸರಿನಲ್ಲಿ ಹಣ ಗಳಿಸಲು ವಾಮಮಾರ್ಗ ಹಿಡಿದಿರುವುದು ದುರಾದೃಷ್ಟ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಇಂದು ಸಂಘಟನೆಗಳು ಸಾವಿರಾರು ಹುಟ್ಟಿಕೊಂಡಿವೆ. ಅವುಗಳ ಮೂಲ ಉದ್ದೇಶ ಅನ್ಯಾಯ, ಶೋಷಣೆ, ಬಡವರ ಮೇಲಿನ ದೌರ್ಜನ್ಯ ಇಂತಹ ವ್ಯವಸ್ಥೆಗಳ ವಿರುಧ್ಧ ಹೋರಾಟ ಮಾಡಬೇಕಾಗಿರುವುದಾಗಿದೆ. ಆದರೆ ಇಂದು ಸಂಘಟನೆಗಳು ಅದರ ವಿರುದ್ದ ನಡೆದುಕೊಳ್ಳುತ್ತಿದ್ದು, ಇದರಿಂದ ದಲಿತರಿಗೆ ನ್ಯಾಯ ಎಲ್ಲಿಯೂ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಇನ್ನು ಜೀವತವಾಗಿದೆ. ಇಂತಹ ಅನಿಷ್ಟಗಳಿಗೆ ಶಿಕ್ಷಣ ಒಂದೇ ಪರಿಹಾರ. ಗ್ರಾಮೀಣ ಭಾಗದಲ್ಲಿರುವ ಬಡತನ ರೇಖೆಯಲ್ಲಿರುವ ವಿದ್ಯಾರ್ಥಿಗಳಿಗೆ ದಲಿತ ಮುಖಂಡರು ಸಹಾಯ ಮಾಡಿ ಶೈಕ್ಷಣಿಕ ಪ್ರಗತಿಗೆ ನೆರವಾಗಬೇಕು ಎಂದು ತಿಳಿಸಿದರು.

ಸಿ.ಪಿ.ಆಯ್ ಭೀಮನಗೌಡ ಪಾಟೀಲ ಮಾತನಾಡಿ, ದಲಿತರು ತಮ್ಮ ನ್ಯಾಯಯುತ ಬೇಡಿಕೆ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದರೆ ಖಂಡಿತವಾಗಿಯೂ ತಮಗೆ ನ್ಯಾಯ ದೊರಕಿಸಿಕೊಡಲು ಪೊಲೀಸ್ ಇಲಾಖೆ ಸಿದ್ದವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಮೇಶ ಧರೇನವರ್ , ಕಲ್ಲಪ್ಪ ಅಂಜುಟಗಿ, ರಾಜು ನೀಲನಾಯಕ, ಪಿಂಟು ರಾಠೋಡ,ಅಂಬೇಡ್ಕರ ತೆನ್ನಿಹಳ್ಳಿ, ಸುರೇಶ ಕಾಳೆ, ಧಾನೇಶ ಹೊಸಮನಿ, ಉಮೇಶ ಹೊಸಮನಿ ಇದ್ದರು.

Related