ಹೆತ್ತ ಮಕ್ಕಳನ್ನೇ ಮಾರಿದ ಅಪ್ಪ-ಅಮ್ಮ

ಹೆತ್ತ ಮಕ್ಕಳನ್ನೇ ಮಾರಿದ ಅಪ್ಪ-ಅಮ್ಮ

ಒಡಿಶಾ : ಇದೊಂದು ರೀತಿಯಲ್ಲಿ ವಿಚಿತ್ರ ಕೇಸ್, ಇಲ್ಲಿ ಅಪ್ಪ-ಅಮ್ಮ ಇಬ್ಬರೂ ಒಟ್ಟಿಗೇ ಇದ್ದಾರೆ. ಆದರೆ ಇಬ್ಬರೂ ಪ್ರತ್ಯೇಕವಾಗಿ ತಮ್ಮಿಷ್ಟದಂತೆ ಬೇರೆ ಬೇರೆ ಮದುವೆಯಾಗಲು ಬಯಸಿದ್ದಾರೆ. ಇದೇ ಕಾರಣಕ್ಕೆ ತಮ್ಮ ಮಕ್ಕಳನ್ನೇ ಮಾರಿದ್ದಾರೆ.

ಇಂಥ ಒಂದು ವಿಷಾದ ಎನ್ನಿಸುವ ಘಟನೆ ನಡೆದಿರುವುದು ಒಡಿಶಾದ ಬುಡಕಟ್ಟು ಜಿಲ್ಲೆ ಮಲ್ಕಂಗಿರಿಯಲ್ಲಿ. ಒಂದನೇ ಮಗುವನ್ನು ಮಾರಾಟ ಮಾಡಿದ್ದರೂ ಅದು ಬೆಳಕಿಗೆ ಬಂದಿರಲಿಲ್ಲ. ಆದರೆ ಇದೀಗ ದಂಪತಿಯ ಎರಡನೆಯ ಮಗ 9 ವರ್ಷದ ಬಸುದೇವ್‌ನನ್ನು ಮಾರಾಟ ಮಾಡಿದ ಮೇಲೆ ಘಟನೆ ಬಹಿರಂಗಗೊಂಡಿದೆ.

ಅವರಿಗೆ ಮಕ್ಕಳು ಅಡ್ಡಿಯಾಗುತ್ತಿದ್ದರು. ಆದ್ದರಿಂದ ಇಂಥದ್ದೊಂದು ಕುಕೃತ್ಯಕ್ಕೆ ಇಳಿದಿದ್ದಾರೆ. ಮಾತ್ರವಲ್ಲದೇ ಮಕ್ಕಳನ್ನು ಮಾರಾಟ ಮಾಡಿದ ಮೇಲೆ ಬೇರೆ ಬೇರೆ ಮದುವೆಯಾಗಿ ಸಂಸಾರವನ್ನೂ ಶುರುಮಾಡಿದ್ದಾರೆ.

ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಜಯಂತಿ ಖಾರಾ ಅವರು ಬಾಲಕನನ್ನು ನೋಡಿದ್ದಾರೆ. ನಂತರ ಅವನ ಬಳಿ ಏನೆಂದು ವಿಚಾರಿಸಿದ್ದಾರೆ. ಬಾಲಕ ತನ್ನ ಕಥೆ ಹೇಳಿದ್ದಾನೆ. ಜಯಂತಿ ಅವರಿಗೆ ಈತನ ವಿಷಯ ಕೇಳಿ ಕರುಳು ಚುರುಕ್ ಎಂದಿದೆ. ತಾವೇ ಆಶ್ರಯ ಕೊಟ್ಟಿದ್ದಾರೆ.

ಆದರೆ ಆತ ಎಲ್ಲಿದ್ದಾನೋ ಗೊತ್ತಿಲ್ಲ ಎಂದಿದ್ದಾನೆ. ವಿಷಯ ಕೇಳಿತಿಳಿದ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಆತನ ಪಾಲಕರ ಬಳಿ ಹೋಗಿದ್ದಾರೆ. ಅವರು ತಾವು ಮಗನನ್ನು ಮಾರಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಪಾಲಕರು ಅಥವಾ ಅವರ ಹತ್ತಿರದ ಸಂಬಂಧಿ ಬಾಲಕನನ್ನು ಕರೆದುಕೊಂಡು ಹೋಗಿ ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುವುದಾದರೆ ನಮ್ಮ ಅಭ್ಯಂತರವಿಲ್ಲ. ಒಂದು ವೇಳೆ ಅವರು ಒಪ್ಪದೇ ಹೋದರೆ ಅವನನ್ನು ಸಮಿತಿಯಲ್ಲಿಯೇ ನೋಡಿಕೊಂಡು, ಅವನ ಭವಿಷ್ಯವನ್ನು ರೂಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Related