ಗಂಗೂಲಿ ಅದ್ಭುತ ನಾಯಕ: ಸಚಿನ್

ಗಂಗೂಲಿ ಅದ್ಭುತ ನಾಯಕ: ಸಚಿನ್

ನವದೆಹಲಿ, ಜು 08 :  ಗಂಗೂಲಿ ಅದ್ಭುತ ನಾಯಕ. ತಂಡದಲ್ಲಿ ಆಟಗಾರರಿಗೆ ಯಾವ ರೀತಿಯಲ್ಲಿ ಸ್ವಾತಂತ್ರ‍್ಯ ಕೊಡಬೇಕು ಹಾಗೂ ಅವರಿಗೆ ಜವಾಬ್ದಾರಿಗಳನ್ನು ಹಂಚಬೇಕೆಂಬುದರ ಸ್ಪಷ್ಟ ಅರಿವು ಅವರಿಗೆ ಇತ್ತು ಎಂದು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಗಂಗೂಲಿ ಶುಕ್ರವಾರ 50 ನೇ ವಸಂಕ್ಕೆ ಕಾಲಿರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ತಮ್ಮ ಹಾಗೂ ಸೌರವ್ ಒಡನಾಟವನ್ನು ನೆನಪಿಸಿಕೊಂಡರು. ಭಾರತ ತಂಡದಲ್ಲಿ ಆಡುವಾಗ ಸೌರವ್ ಮತ್ತು ಸಚಿನ್ ಹಲವು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದರು. ಯಶಸ್ವಿ ಆರಂಭಿಕ ಜೋಡಿಯೂ ಆಗಿದ್ದರು.

ಸೌರವ್ ತಂಡದ ನಾಯಕತ್ವ ವಹಿಸಿಕೊಂಡಾಗ ಭಾರತ ಕ್ರಿಕೆಟ್ ಕ್ಷೇತ್ರ ಮಗ್ಗಲು ಬದಲಿಸಿತು. ಭಾರತದ ಕ್ರಿಕೆಟ್ ಅನ್ನು ಉನ್ನತಮಟ್ಟಕ್ಕೆ ಬೆಳೆಸುವ ಯುವಪಡೆಯನ್ನು ಸಿದ್ಧಗೊಳಿಸುವತ್ತ ನಮ್ಮ ಚಿತ್ತ ಇತ್ತು. ಆ ಹಾದಿಯಲ್ಲಿ ದಾದಾ (ಸೌರವ್) ಪ್ರಯತ್ನ ದೊಡ್ಡದು. ಈ ಹಂತದಲ್ಲಿ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್, ಹರಭಜನ್ ಸಿಂಗ್, ಆಶಿಶ್ ನೆಹ್ರಾ ಅವರಂತಹ ಪ್ರತಿಭಾವಂತರು ಲಭಿಸಿದರು.  ಎಷ್ಟೇ ಪ್ರತಿಭೆಯಿದ್ದರೂ ಪ್ರೋತ್ಸಾಹ ನೀಡುವ ದಿಟ್ಟ ನಾಯಕತ್ವ ಬೇಕಾಗುತ್ತದೆ. ಯುವ ಆಟಗಾರರ ಬೆನ್ನಿಗೆ ಗಂಗೂಲಿ ನಿಂತರು ಎಂದರು.

೧೯೯೯ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡಕ್ಕೆ ನಾನು ನಾಯಕನಾಗಿದ್ದೆ. ಆ ಸಂದರ್ಭದಲ್ಲಿ ನಾನು ನಾಯಕತ್ವ ಬಿಟ್ಟುಕೊಡಲು ನಿರ್ಧರಿಸಿದ್ದೆ. ಆದ್ದರಿಂದ

ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಗಂಗೂಲಿಯನ್ನು ಉಪನಾಯಕರನ್ನಾಗಿ ಮಾಡಲು ಸಲಹೆ ನೀಡಿದ್ದೆ. ಅವರಲ್ಲಿ ನಾಯಕತ್ವದ ಗುಣಗಳು ಮತ್ತು ಕ್ರಿಕೆಟ್  ಅರಿವು ಚೆನ್ನಾಗಿರುವುದ ಕುರಿತು ಬಹಳ ಹತ್ತಿರದಿಂದ ಗಮನಿಸಿ ತಿಳಿದಿದ್ದೆ. ಅವರು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಬೆಳೆದರು ಎಂದು ಸಚಿನ್ ನೆನಪಿಸಿಕೊಂಡರು.

Related