ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರಗೆ ಅಭಿನಂದನೆ

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರಗೆ ಅಭಿನಂದನೆ

ವಿಜಯಪುರ : ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಹಾಸಿಂಪೀರ ವಾಲಿಕಾರಗೆ ಜಿಲ್ಲೆಯ ಯುವ ಸಾಹಿತಿ ಮಂಜುನಾಥ ಎಸ್. ಕಟ್ಟಿಮನಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಾರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಾಮಾಜಿಕ ಚಿಂತಕ, ಹೋರಾಟಗಾರ, ಮುಖಂಡ ಹಾಸಿಂಪೀರ ವಾಲಿಕಾರ ಅವರು ಆಯ್ಕೆಯಾಗಿರುವುದು ತಮಗೆ ಹಾಗೂ ಅನೇಕರಿಗೆ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಅದರಂತೆ ಈ ಚುನಾವಣೆಯ ಫಲಿತಾಂಶ ಎಲ್ಲಾ ವಾದಿಗಳ ತರ್ಕವನ್ನು ತಲೆಕೆಳಗೆ ಮಾಡಿದ್ದು, ಈ ಚುನಾವಣೆಯಲ್ಲಿ ಮತದಾರರು ಪಕ್ಷಾತೀತ, ಜಾತ್ಯಾತೀತ ಮತ್ತು ಧರ್ಮಾತೀತವಾಗಿ ಹಾಸಿಂಪೀರ ವಾಲಿಕಾರ ಅವರನ್ನು ಮತ ಹಾಕಿ ಗೆಲ್ಲಿಸುವ ಮೂಲಕ ವಾದಿಗಳ ವ್ಯಾದಿಗೆ ಪರೋಕ್ಷ ಸಂದೇಶ ನೀಡಿದ್ದಾರೆ ಎಂದು ಕುಟುಕಿದ್ದಾರೆ.

ರಾಜಕೀಯ ಚುನಾವಣೆಗೆ ಹೋಲಿಸಿದರೆ ಕಸಾಪ ಚುನಾವಣೆ ವಿಭಿನ್ನವಾಗಿದ್ದರೂ, ರಾಜಕೀಯ ಚುನಾವಣೆಗಿಂತಲೂ ಹೆಚ್ಚು ತಂತ್ರ-ಪ್ರತಿತಂತ್ರಗಳು ಮತ್ತು ಭಿನ್ನವಾದ ಸೋಶಿಯಲ್ ಎಂಜಿನಿಯರಿAಗ್ ನಡೆದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಚುನಾವಣೆಯಲ್ಲಿ ಕೆಲವರು ಜನ ಜಾತಿ ಲೆಕ್ಕಾಚಾರ ಹಾಕಿದ್ದರೆ, ಮತ್ತೆ ಹಲವರು ಧರ್ಮ ಹಾಗೂ ಪಕ್ಷದ ಲೆಕ್ಕಾಚಾರ ಹಾಕಿ ತಾವಂದುಕೊಂಡಂತೆ ಎಲ್ಲ ಫಲಿತಾಂಶ ಬರಲಿದೆ ಎಂಬ ಹುಮ್ಮಸ್ಸಿನಲ್ಲಿದ್ದರು. ಆದರೆ ಹಾಸಿಂಪೀರ ವಾಲಿಕಾರ ಅವರು ಎಲ್ಲ ಜಾತಿ, ಸಮುದಾಯ ಮತ್ತು ಧರ್ಮದವರೊಂದಿಗೆ ಹೊಂದಿದ್ದ ಉತ್ತಮ ಬಾಂಧವ್ಯ ಅವರ ಈ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ.

ಹಾಸಿಂಪೀರ ವಾಲಿಕಾರ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೂ, ಹಿಂದೂ ಸೇರಿದಂತೆ ಇತರ ಧರ್ಮಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶರಣರ, ವಚನಗಳು, ಆಚರಣೆಗಳು ಸೇರಿದಂತೆ ನಾನಾ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ. ಮುಂಬರುವ ಚುನಾವಣೆಗಳಿಗೆ ತಮ್ಮದೇ ಆದ ವಾದ ಇಟ್ಟುಕೊಂಡಿರುವವರಿಗೆ ಈ ಫಲಿತಾಂಶ ಎಚ್ಚರಿಕೆಯ ಗಂಟೆಯೂ ಆಗಿದೆ.

ಕಸಾಪದ ಹಾಲಿ ಅಧ್ಯಕ್ಷರಾಗಿರುವ ಹಾಸಿಂಪೀರ ವಾಲಿಕಾರ ಅವರು ಮುಂಬರುವ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತನ್ನು ಇನ್ನಷ್ಟು ಬಲಪಡಿಸಬೇಕು. ಕಸ್ತೂರಿ ಕನ್ನಡದ ಕಂಪನ್ನು ಮತ್ತಷ್ಟು ಪಸರಿಸಲು ಶ್ರಮಿಸಬೇಕು. ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related