ಬೆಂಗಳೂರು: ರಾಜ್ಯದಲ್ಲಿ ಕಳೆದ ತಿಂಗಳು ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ನಡೆಸಿದ್ದು ಜೂನ್ 30ಕ್ಕೆ ಪರಿಶಿಷ್ಟ ಜಾತಿ (SC) ಸಮಗ್ರ ಸಮೀಕ್ಷೆ ಕೊನೆಗೊಂಡಿದೆ.
ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬೆಂಗಳೂರು ನಗರದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯನ್ನು ನಡೆಸಿತ್ತು. ಜಾತಿ ಸಮಗ್ರ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಬಿಬಿಎಂಪಿಯು ಮನೆಗಳಿಗೆ ಸ್ಟಿಕ್ಕರ್ ಅಂಟಿಸುತ್ತಿತ್ತು. ಸಮೀಕ್ಷೆ ನಡೆಸುತ್ತಿದ್ದ ಮನೆಗೆ ಕೂಡ ಸ್ಟಿಕರ್ ಅಂಟಿಸಲಾಗುತ್ತಿತ್ತು ಎಂದು ಖುದ್ದು ಜನರೇ ಆರೋಪಿಸಿದ್ದರು.
ಇನ್ನು ಮನೆಗಳಿಗೆ ಸ್ಟಿಕ್ಕರ್ ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಭಾಗ ಎಂದು ಬಿಬಿಎಂಪಿ ಸ್ಪಷ್ಟನೆ ಕೊಟ್ಟಿದೆ.
ಈ ಕುರಿತಾಗಿ ಬಿಬಿಎಂಪಿ ಟ್ವೀಟ್ ಮಾಡಿದ್ದು, ಕರ್ನಾಟಕ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ, ಬೆಂಗಳೂರು ನಗರದಾದ್ಯಂತ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯನ್ನು ನಡೆಸುತ್ತಿದೆ. ಈ ಸಮೀಕ್ಷೆಯು ಪ್ರತಿ ಅರ್ಹ ಕುಟುಂಬವನ್ನು ಒಳಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಸಮೀಕ್ಷಾ ತಂಡಗಳು ನಿವಾಸಿಗಳೊಂದಿಗೆ ಸಂವಹನ ನಡೆಸದೆ ಮನೆಗಳ ಮೇಲೆ ಸಮೀಕ್ಷೆಯ ಸ್ಟಿಕ್ಕರ್ಗಳನ್ನು ಅಂಟಿಸಿವೆ ಎಂದು ಕೆಲವು ನಿವಾಸಿಗಳು, ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದರು.
ಮನೆಯ ಸದಸ್ಯರೊಂದಿಗೆ ಸಂವಹನ ನಡೆಸದೆ ಸ್ಟಿಕ್ಕರ್ಗಳನ್ನು ಅಂಟಿಸಬಾರದು ಎಂದು ಸಮೀಕ್ಷಾ ತಂಡಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಆದಾಗ್ಯೂ, ಕೆಲ ಸಂದರ್ಭಗಳಲ್ಲಿ ಇದನ್ನು ಅನುಸರಿಸದಿರಬಹುದು ಎಂದು ನಾವು ಒಪ್ಪಿಕೊಳ್ಳುತ್ತೇವೆ. ಸಮೀಕ್ಷೆ ನಡೆಸಿದ ಲಕ್ಷಾಂತರ ಮನೆಗಳಲ್ಲಿ, ಕೆಲವು ಮನೆಗಳು ನಮ್ಮ ಸಮೀಕ್ಷಕರಿಂದ ತಪ್ಪಿಹೋಗಿರಬಹುದು.
ಸಂವಹನ ನಡೆಯದಿದ್ದಲ್ಲಿ ಏನು ಮಾಡಬೇಕು? ಯಾವುದೇ ಸಂವಹನವಿಲ್ಲದೆ ಸ್ಟಿಕ್ಕರ್ ಅಂಟಿಸಿದ್ದರೆ, ದಯವಿಟ್ಟು ನಮ್ಮ ಸಹಾಯವಾಣಿ ಸಂಖ್ಯೆ 9481359000ಗೆ ಕರೆ ಮಾಡಿ (ಸಂಖ್ಯೆಯು ಸ್ಟಿಕ್ಕರ್ನ ಮೇಲೆ ಮುದ್ರಿತವಾಗಿರುತ್ತದೆ) ಸಮೀಕ್ಷೆಯನ್ನು ಸರಿಯಾಗಿ ಪೂರ್ಣಗೊಳಿಸಲು ಅಗತ್ಯ ವ್ಯವಸ್ಥೆ ಮಾಡುತ್ತೇವೆ ಎಂದು ಬಿಬಿಎಂ ಹೇಳಿದೆ. ಇದನ್ನೂ ಓದಿ: ಸಚಿವ ಸಂಪುಟ ಸಭೆಯಲ್ಲಿಒಟ್ಟು 48 ವಿಷಯಗಳು ಚರ್ಚೆ: ಸಿ.ಎಂ
ಅಲ್ಲದೆ ಸಮೀಕ್ಷೆಗೆ ಒಳಪಡದ ಯಾವುದೇ ಪರಿಶಿಷ್ಟ ಜಾತಿ ಕುಟುಂಬವು ಆನ್ಲೈನ್ನಲ್ಲಿ ಸ್ವಯಂ ಘೋಷಣಾ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಲಿಂಕ್ ಅನ್ನು ಪ್ರವೇಶಿಸಲು ಮತ್ತು ನಿಮ್ಮ ಮಾಹಿತಿಯನ್ನು ಸಲ್ಲಿಸಲು ಸ್ಟಿಕ್ಕರ್ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಬಹುದಾಗಿದೆ.
