ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ಬಾನಂಗಳದಲ್ಲಿ ಕಣ್ಮನ ಸೆಳೆಯಲು ಬರುತ್ತಿದೆ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ.
ಹೌದು, ಸಿಲಿಕಾನ್ಸಿಟಿ ಬಾನಂಗಳದಲ್ಲಿ ವಿಸ್ಮಯಕಾರಿ, ಬೆರಗುಗೊಳಿಸುವ ದೃಶ್ಯವನ್ನು ವೀಕ್ಷಿಸಲು ಸಜ್ಜಾಗಿದೆ. ಇದೇ ಫೆಬ್ರವರಿ 10-14 ರಿಂದ, ಪ್ರತಿಷ್ಠಿತ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಅದ್ಭುತ ವಾಯು ಪ್ರದರ್ಶನವನ್ನು ಪ್ರದರ್ಶಿಸುವ ಮೂಲಕ ಬೆಂಗಳೂರಿನ ಬಾನಂಗಳವನ್ನು ಬೆಳಗಲಿದೆ.
ಭಾರತೀಯ ವಾಯುಪಡೆಯ ರಾಯಭಾರಿಗಳು ಎಂದು ಕರೆಯಲ್ಪಡುವ SKAT ತನ್ನ ಅದ್ಭುತ ಕೌಶಲಕ್ಕೆ ಹೆಸರಾಗಿದೆ. ಕೆಂಪು ಮತ್ತು ಬಿಳಿ ಹಾಕ್ Mk-132 ಜೆಟ್ಗಳನ್ನು ಹಾರಿಸುವ ಈ ಗಣ್ಯ ತಂಡವು ಉಸಿರು ಬಿಗಿಹಿಡಿದಿಡುವಂಥ ಅದ್ಭುತ ಕುಶಲತೆಯನ್ನು ಪ್ರದರ್ಶಿಸುವ ಮೂಲಕ ಜನರನ್ನು ಬೆರಗುಗೊಳಿಸಲಿದೆ. ಆಕರ್ಷಕವಾದ ಲೂಪ್ ಮತ್ತು ರೋಮಾಂಚಕ ಬ್ಯಾರೆಲ್ ರೋಲ್ಗಳಿಂದ ಹಿಡಿದು ಗುರುತ್ವಾಕರ್ಷಣೆಗೇ ಸವಾಲು ಎಸಗುವ ರೀತಿಯಲ್ಲಿ ತಲೆಕೆಳಗಾಗಿ ಹಾರಾಟ ನಡೆಸುವ ಮೂಲಕ, ಅಪ್ರತಿಮ ಪರಿಣತಿ ಹೊಂದಿರುವ ಪೈಲಟ್ಗಳ ಕೈಚಳಕವನ್ನು ಅಂದು ವೀಕ್ಷಿಸಬಹುದಾಗಿದೆ. ಪ್ರತಿಯೊಂದು ಪ್ರದರ್ಶನಗಳೂ ಪೈಲಟ್ಗಳ ಅಪ್ರತಿಮ ಪರಿಣತಿ ಮತ್ತು ಸಮನ್ವಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತಿವೆ.
ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವನ್ನು 1996 ರಲ್ಲಿ ಸ್ಥಾಪಿಸಲಾಯಿತು. ಈ ತಂಡವು ಒಂಬತ್ತು ವಿಮಾನಗಳನ್ನು ಹೊಂದಿರುವ ಏಷ್ಯಾದ ಏಕೈಕ ಏರೋಬ್ಯಾಟಿಕ್ ತಂಡ ಎಂಬ ಪ್ರತಿಷ್ಠಿತ ಬಿರುದನ್ನು ಹೊಂದಿದೆ ಮತ್ತು ವಿಶ್ವದ ಕೆಲವೇ ಕೆಲವು ಗಣ್ಯ ಏರೋಬ್ಯಾಟಿಕ್ ತಂಡಗಳಲ್ಲಿ ಒಂದೆನಿಸಿದೆ. ಈ ಅಸಾಧಾರಣ ತಂಡವು ಭಾರತದಾದ್ಯಂತ 700 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು, ಚೀನಾ, ಶ್ರೀಲಂಕಾ, ಮ್ಯಾನ್ಮಾರ್, ಥಾಯ್ಲೆಂಡ್, ಸಿಂಗಪುರ ಮತ್ತು ಯುಎಇಯಂತಹ ದೇಶಗಳಲ್ಲಿ ಅಂತರರಾಷ್ಟ್ರೀಯ ವಾಯು ಪ್ರದರ್ಶನಗಳಲ್ಲಿ ಭಾರತೀಯ ವಾಯುಪಡೆಯ ವೃತ್ತಿಪರತೆಯನ್ನು ಪ್ರತಿನಿಧಿಸುತ್ತ ಬಂದಿದೆ.
ಬಣ್ಣ ಬಣ್ಣದ ಹೊಗೆಯನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಹಾಕ್ ಎಂಕೆ 132 ವಿಮಾನದೊಂದಿಗೆ ಹೊಗೆ ಪಾಡ್ಗಳನ್ನು ಇತ್ತೀಚೆಗೆ ಸಂಯೋಜಿಸಲಾಗಿದೆ. ಇದನ್ನು ಭಾರತದಲ್ಲಿ ಭಾರತೀಯ ವಾಯುಪಡೆಯ ನೆಲೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಂಡವು ತಮ್ಮ ವೈಮಾನಿಕ ಪ್ರದರ್ಶನಗಳ ಸಮಯದಲ್ಲಿ ಆಕಾಶದಾದ್ಯಂತ ರಾಷ್ಟ್ರಧ್ವಜದ ಮೂರು ಬಣ್ಣಗಳನ್ನು ಪ್ರದರ್ಶಿಸಲು ಈ ಪಾಡ್ ಅನುವು ಮಾಡಿಕೊಡುತ್ತದೆ. ಈ ಪ್ರದರ್ಶನಗಳಿಗೆ ದೃಶ್ಯ ಸಂಯೋಜನೆಯನ್ನೂ ಸೇರಿಸಲಾಗಿರುವ ಕಾರಣ, ರಾಷ್ಟ್ರೀಯ ಹೆಮ್ಮೆಯ ಪ್ರಬಲ ಸಂಕೇತವಾಗಿಯೂ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು ಬಾಹ್ಯಾಕಾಶ ಎಂಜಿನಿಯರಿಂಗ್ ಮತ್ತು ನಾವೀನ್ಯತೆಯಲ್ಲಿ ಭಾರತದ ಸಾಧನೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಸಾಕ್ಷಿಯಾಗಿದೆ.
