ಹಣಕಾಸು ಇಲಾಖೆಯ ಮೊಂಡುತನ

ಹಣಕಾಸು ಇಲಾಖೆಯ ಮೊಂಡುತನ

ಬೆಂಗಳೂರು: ಹಣಕಾಸು ಇಲಾಖೆ ರಾಜ್ಯದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಸಚಿವರು ಹಾಗೂ ಮುಖ್ಯಮಂತ್ರಿಗಳ ಶಿಫಾರಸುಗಳನ್ನು ಆ ಇಲಾಖೆ ಪರಿಗಣಿಸುವುದಿಲ್ಲ ಎಂದು ಬಸವನ ಬಾಗೇವಾಡಿಯ ಸದಸ್ಯರಾದ ಶಿವಾನಂದ ಪಾಟೀಲ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ಟೀಕೆ ಮಾಡಿದರು.
ಬಸವನ ಬಾಗೇವಾಡಿಯಲ್ಲಿ ಮಾರುಕಟ್ಟೆ ನಿರ್ಮಾಣ ಶೇ 75 ರಷ್ಟು ಪೂರ್ಣಗೊಂಡಿದೆ. ವಾಹನ ನಿಲುಗಡೆಗೆ ಇನ್ನೊಂದು ನೆಲವನ್ನು ಹೆಚ್ಚುವರಿಯಾಗಿ ನಿರ್ಮಿಸಬೇಕಾಗಿದೆ. ಆದರೆ ಹಣದ ಕೊರತೆಯಿಂದ ಕೆಲಸ ಪೂರ್ಣಗೊಂಡಿಲ್ಲ. ರೂ. ಏಳು ಕೋಟಿಗಳನ್ನು ಬಿಡುಗಡೆ ಮಾಡಿದರೆ ನಿರ್ಮಾಣ ಪೂರ್ಣಗೊಳ್ಳುತ್ತದೆ. ಕಳೆದ ಮೂರು, ನಾಲ್ಕು ವರ್ಷಗಳಿಂದ ಹಣಕಾಸು ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ. ಮಾಜಿ, ಹಾಲಿ ಮುಖ್ಯಮಂತ್ರಿಗಳು ಮಾಡಿದ ಶಿಫಾರಸುಗಳನ್ನು ಹಣಕಾಸು ಇಲಾಖೆ ತಿರಸ್ಕರಿಸಿದೆ. ಪಟ್ಟಣದಲ್ಲಿ ಕೊಳಚೆ ನೀರು ರಸ್ತೆಗಳಲ್ಲಿ ದುರ್ವಾಸನೆ ಬೀರುತ್ತಿದೆ. ಅದರ ದುರಸ್ತಿಗಾಗಿ 36 ಲಕ್ಷ ರೂಪಾಯಿಗಳನ್ನು ಪಾವತಿಸಲು ಹಣಕಾಸು ಇಲಾಖೆ ಮೊಂಡುತನ ತೋರುತ್ತದೆ ಎಂದು ಕಿಡಿಕಾರಿದರು. ಶಾಸಕ ಟೀಕೆಗಳನ್ನು ಹಲವು ಸದಸ್ಯರು ಒಪ್ಪಿದರು. ಕೊನೆಗೆ ಸಚಿವ ನಾಗರಾಜ್ ಮಧ್ಯಪ್ರವೇಶಿಸಿ ಮಾರುಕಟ್ಟೆಯ ನಿರ್ಮಾಣವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಾಕಷ್ಟು ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಉತ್ತರಿಸಿದರು.

Related